ಸೋಮವಾರಪೇಟೆ,ಡಿ.21: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ನೂತನವಾಗಿ ದತ್ತಿ ನಿಧಿ ಸ್ಥಾಪನೆಗೆ ಚಾಲನೆ ನೀಡಲಾಯಿತು.
ಪಟ್ಟಣದ ವಿರಕ್ತ ಮಠದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ರಾಯರಕೊಪ್ಪಲು ಗ್ರಾಮದ ಕಾಫಿ ಬೆಳೆಗಾರರಾದ ಪಾರ್ವತಿ ಮಲ್ಲೇಶ್ ಹಾಗೂ ಮಲ್ಲೇಶ್ ಅವರು ತಮ್ಮ ಪುತ್ರ ದಿ. ಎನ್.ಎಂ. ಶಶಿಧರ್ ಸ್ಮರಣಾರ್ಥ ದತ್ತಿ ನಿಧಿ ಸ್ಥಾಪನೆಗಾಗಿ ಹತ್ತು ಸಾವಿರ ರೂ.ಗಳ ಚೆಕ್ಕನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಅಧ್ಯಕ್ಷ ಎಸ್. ಮಹೇಶ್ ಮಾತನಾಡಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ದಾನಿಗಳಿಂದ ಹಣ ಸಂಗ್ರಹಿಸಿ ಕೇಂದ್ರ ಕಚೆÉೀರಿಯ ಮೂಲಕ ಬ್ಯಾಂಕ್‍ನಲ್ಲಿ ಠೇವಣಿ ಇಟ್ಟು ಅದರಿಂದ ಬರುವ ಬಡ್ಡಿಯಿಂದ ದಾನಿಗಳು ನೀಡಿದ ಸೂಚನೆಯಂತೆ ವರ್ಷದಲ್ಲಿ ರಾಜ್ಯದ ಎಲ್ಲಾದರೂ ಒಂದುಕಡೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮೂಲಕ ದತ್ತಿ ಉಪನ್ಯಾಸವನ್ನು ಏರ್ಪಡಿಸಲಾಗುತ್ತದೆ ಎಂದರು.
ರಾಜ್ಯದಲ್ಲಿ ಈಗಾಗಲೇ ಹಲವಾರು ದತ್ತಿ ನಿಧಿಗಳನ್ನು ಸ್ಥಾಪಿಸಲಾಗಿದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಘಟಕದ ವತಿಯಿಂದಲೂ ಹೊಸ ದತ್ತಿ ಸ್ಥಾಪನೆಗೆ ಚಿಂತಿಸಿ ಇಂದು ಪಾರ್ವತಿ ಮಲ್ಲೇಶ್ ಅವರು ಚೆಕ್ ನೀಡುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ವಿರಕ್ತ ಮಠಾಧೀಶರಾದ ವಿಶ್ವೇಶ್ವರ ಸ್ವಾಮೀಜಿ, ಕಲ್ಲು ಮಠದ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿ ಸದಾಶಿವ ಸ್ವಾಮೀಜಿ, ಮುದ್ದಿನ ಕಟ್ಟೆ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಪಾರ್ವತಿ ಮಲ್ಲೇಶ್ ಅವರ ಪುತ್ರಿ ಎನ್.ಎಂ. ಗೀತಾಂಜಲಿ ಸೇರಿದಂತೆ ಇತರರು ಹಾಜರಿದ್ದರು.