ಶನಿವಾರಸಂತೆ, ಸೆ. 2: ಗೌರಿ - ಗಣೇಶ ಚತುರ್ಥಿ ಪ್ರಯುಕ್ತ ಹೋಬಳಿಯಾದ್ಯಂತ ಗೌರಿ - ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ.
ಪಟ್ಟಣದ ಗಣಪತಿ - ಪಾರ್ವತಿ - ಚಂದ್ರಮೌಳೇಶ್ವರ ದೇವಾಲಯದ ಸಭಾಂಗಣ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಗೌರಿ - ಗಣೇಶ ಮೂರ್ತಿಗಳ ಅಂಗಡಿ ತೆರೆಯ ಲಾಗಿದ್ದು, ವ್ಯಾಪಾರ ಬಿರುಸಾಗಿ ಸಾಗಿದೆ. ಸಾಂಪ್ರದಾಯಿಕವಾಗಿ ಹಬ್ಬ ಆಚರಿಸುವ ಜನ ಉತ್ಸಾಹದಿಂದ ಮೂರ್ತಿಗಳ ಖರೀದಿಯಲ್ಲಿ ತೊಡಗಿದ್ದಾರೆ. 40 ವರ್ಷಗಳಿಂದ ಶನಿವಾರಸಂತೆಯ ಗಣಪತಿ ದೇವಾಲಯದಲ್ಲಿ ಗಣಪತಿ ಮೂರ್ತಿಗಳ ಮಾರಾಟ ಮಾಡುತ್ತಿರುವ ಮಲ್ಲಿಪಟ್ಟಣದ ಗಂಗಾಧರಪ್ಪ ಈ ಬಾರಿ ಐವತ್ತಕ್ಕೂ ಅಧಿಕ ವೈವಿಧ್ಯಮಯ ಗೌರಿ - ಗಣೇಶ ಮೂರ್ತಿಗಳನ್ನು ತಂದಿದ್ದಾರೆ.
ಪ್ರತಿವರ್ಷ ಜೂನ್ ತಿಂಗಳಿನಿಂದ ಸೆಪ್ಟೆಂಬರ್ವರೆಗೆ ಮೂರ್ತಿಗಳ ತಯಾರಿಕೆಯಲ್ಲಿ ತೊಡಗುತ್ತಾರೆ. ಆವೆ ಮಣ್ಣು ಸಂಗ್ರಹಿಸಿ ರಾಸಾಯನಿಕ ಬಣ್ಣಗಳನ್ನು ಬಳಸದೇ ಪರಿಸರ ಸ್ನೇಹಿ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಗಂಗಾಧರಪ್ಪ ಅಂಗಡಿಯಲ್ಲಿ ರೂ. 50 ರಿಂದ ರೂ. ಮೂರು ಸಾವಿರ ಮೌಲ್ಯದ ಅರ್ಧ ಅಡಿಯಿಂದ 4 ಅಡಿ ಎತ್ತರದವರೆಗಿನ ಮೂರ್ತಿಗಳು ಆಕರ್ಷಕವಾಗಿವೆ. ಪತ್ನಿ ಲಲಿತಮ್ಮ ಶಾಲೆಯೊಂದರಲ್ಲಿ ಅಕ್ಷರ ದಾಸೋಹದಡಿ ಅಡುಗೆ ಕೆಲಸ ಮಾಡುತ್ತಾರೆ. ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ ತನ್ನ ಕೆಲಸಕ್ಕೆ ಅವರ ಸಹಕಾರವಿಲ್ಲ. ಪುಟ್ಟ ಮನೆಯೊಂದನ್ನು ಬಿಟ್ಟರೆ ಹೊಲ ಗದ್ದೆಗಳಿಲ್ಲ. ವರ್ಷದಲ್ಲಿ ನಾಲ್ಕು ತಿಂಗಳು ಗಣಪತಿ ವಿಗ್ರಹ ಮಾಡುವ ಕಾಯಕವೇ ಜೀವನಕ್ಕೆ ಆಧಾರ. ಉಳಿದ ತಿಂಗಳಲ್ಲಿ ಪೆಂಯಿಟಿಂಗ್ ಮಾಡಿ ಜೀವನ ಸಾಗಿಸುತ್ತಿರುವದಾಗಿ ಗಂಗಾಧರಪ್ಪ ಹೇಳುತ್ತಾರೆ.