ಆಲೂರು-ಸಿದ್ದಾಪುರ, ಸೆ. 30: ಶನಿವಾರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2015-16ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಜೆ.ಸಿ. ಲೋಕೇಶ್ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.ಸಭೆಯಲ್ಲಿ ಸಂಘದ ಅಭಿವೃದ್ಧಿ ಕುರಿತು ಸಹಕಾರಿ ಸದಸ್ಯರು ಗಳೊಂದಿಗೆ ಚರ್ಚಿಸಲಾಯಿತು. ಸಂಘದಲ್ಲಿ 2016ನೇ ಸಾಲಿನಲ್ಲಿ 2325 ಸದಸ್ಯರುಗಳಿದ್ದು, ಸದಸ್ಯರ ಪಾಲು ಬಂಡವಾಳ ರೂ. 90 ಲಕ್ಷದ 67 ಸಾವಿರದ 116 ಗಳಿರುತ್ತದೆ ಎಂದು ಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಇ. ದೊಡ್ಡಯ್ಯ ತಿಳಿಸಿದರು.
ಸಭೆಯಲ್ಲಿ ಸದಸ್ಯ ನಟರಾಜ್ ಕೃಷಿ ಸಾಲ ಕುರಿತು ಪ್ರಸ್ತಾಪಿಸಿ, ಇಲ್ಲಿಯ ತನಕ ಸದರಿ ಸಹಕಾರ ಸಂಘ ಕೃಷಿ ಸಾಲವನ್ನು ರೂ. 5 ಲಕ್ಷವರೆಗೆ ನೀಡುತ್ತಿದೆ.
ಮುಂದಿನ ದಿನಗಳಲ್ಲಿ ಕೃಷಿ ಸಾಲವನ್ನು ರೂ. 10 ಲಕ್ಷಕ್ಕೆ ಏರಿಕೆ ಮಾಡುವಂತೆ ಒತ್ತಾಯಿಸಿದರು. ಸಹಕಾರಿ ಸದಸ್ಯರ ಒತ್ತಾಯದಂತೆ ಸದಸ್ಯರ ಡಿವಿಡೆಂಡ್ ಫಂಡ್ ಅನ್ನು ಶೇ. 14 ಕ್ಕೆ ಏರಿಸಲಾಯಿತು.
ಸಹಕಾರ ಸಂಘದ ವತಿಯಿಂದ ಅಂದಾಜು ರೂ. 1 ಕೋಟಿ ವೆಚ್ಚದಲ್ಲಿ ನೂತನವಾಗಿ ಗೋದಾಮು ಕಟ್ಟಡ ನಿರ್ಮಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಆರ್.ಎಂ. ಭುವನ್, ನಿರ್ದೇಶಕರಾದ ಎಸ್.ಸಿ. ಶರತ್ ಶೇಖರ್, ಟಿ.ಆರ್. ಗಿರೀಶ್, ಎಸ್.ವಿ. ಜಗದೀಶ್, ಎಸ್.ಎನ್. ರಘು, ಡಿ. ಅರವಿಂದ್, ಡಿ.ಇ. ಬಸಪ್ಪ, ಕೆ.ಪಿ. ಪುಷ್ಪ, ಸವಿತಾ ಸತೀಶ್ ಇದ್ದರು.
- ದಿನೇಶ್ ಮಾಲಂಬಿ