ಒಡೆಯನಪುರ, ಜೂ. 17: ಸಮಿಪದ ಗೋಪಾಲಪುರ, ಒಡೆಯನಪುರ, ನಿಡ್ತ, ಹಿತ್ಲುಕೆರಿ, ರಾಮನಹಳ್ಳಿ ಮುಂತಾದ ಕಡೆಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಗ್ರಾಮಸ್ಥರು, ರೈತರು, ವಿದ್ಯಾರ್ಥಿಗಳು ಇದರಿಂದ ಕಂಗಲಾಗಿದ್ದಾರೆ. ನಿಡ್ತ ಮೀಸಲು ಅರಣ್ಯದಿಂದ ಬರುವ ಕಾಡಾನೆಗಳ ಹಿಂಡು ರಾತ್ರಿಯಾಗುತ್ತಿದ್ದಂತೆ ಗ್ರಾಮಗಳಿಗೆ ನುಗ್ಗಿ ರೈತರು ಬೆಳೆದ ಕೃಷಿಯನ್ನು ಧ್ವಂಸಗೊಳಿಸುತ್ತಿದ್ದು, ಇದರಿಂದ ಈ ಭಾಗದ ರೈತರು ಮತ್ತು ಜನರು ನಷ್ಟ ಅನುಭವಿಸುವಂತಾಗಿದೆ. ಕೆಲವೊಮ್ಮೆ ಈ ಕಾಡಾನೆಗಳು ಸಂಜೆ ವೇಳೆ ಮತ್ತು ಮುಂಜಾನೆ ವೇಳೆಯಲ್ಲಿ ಗ್ರಾಮದೊಳಗೆ ನುಸುಳುತ್ತಿರುವದರಿಂದ ಗ್ರಾಮಸ್ಥರು ಸೇರಿದಂತೆ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಭಯಬೀತರಾಗಿದ್ದಾರೆ. ಗುರುವಾರ ರಾತ್ರಿ ಗೋಪಾಲಪುರ ಗ್ರಾಮದೊಳಗೆ ನುಸುಳಿದ ಕಾಡಾನೆಗಳು ರೈತರ ಕಾಫಿ ತೋಟದೊಳಗೆ ನುಸುಳಿ ಕಾಫಿ ಗಿಡ, ಬಾಳೆ, ತೆಂಗು ಮುಂತಾದ ಕೃಷಿ ಬೆಳೆಯನ್ನು ಧ್ವಂಸÀಗೊಳಿಸಿದೆ.
ಗೋಪಾಲಪುರ ಗ್ರಾಮದ ಪುಟ್ಟಪ್ಪ ಎಂಬವರಿಗೆ ಸೇರಿದ ಕಾಫಿ ತೋಟಕ್ಕೆ ನುಸುಳಿದ ಕಾಡಾನೆಗಳು ಕಾಫಿ ಗಿಡ, ಬಾಳೆ ಫಸಲು ಸೇರಿದಂತೆ ರೂ. 50 ಸಾವಿರ ಮೌಲ್ಯದ ಕೃಷಿ ಬೆಳೆಗಳನ್ನು ಧ್ವಂಸಗೊಳಿಸಿದೆ. ಅಲ್ಲದೆ ಈ ಕಾಡಾನೆಗಳು ತೋಟದಲ್ಲಿ ಅಳವಡಿಸಿರುವ ನೀರು ಹಾಯಿಸುವ ಪೈಪ್ಗಳನ್ನು ತುಳಿದು ಹಾನಿಗೊಳಿಸಿದೆ ಎಂದು ಪುಟ್ಟಪ್ಪ ಅರಣ್ಯ ಇಲಾಖೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.