ಶನಿವಾರಸಂತೆ, ಡಿ. 1: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದ್ರೆಹೊಸಳ್ಳಿ ಗ್ರಾಮದ ಸರ್ವೆ ನಂ. 42/2 ರ ಪೈಸಾರಿ ಜಾಗದಲ್ಲಿ ಶನಿವಾರಸಂತೆ ಪಂಚಾಯಿತಿ ವ್ಯಾಪ್ತಿಯ ಕಸವನ್ನು ಹಾಕಲು ಕಂದಾಯ ಇಲಾಖೆಯವರು 13/4 ಏಕರೆ ಜಾಗವನ್ನು ಗುರುತಿಸಿದ್ದು, ಯಾವದೇ ಕಾರಣಕ್ಕೂ ಕಸ ವಿಲೇವಾಗಿ ಮಾಡಲು ಅವಕಾಶ ಮಾಡಿಕೊಡುವದಿಲ್ಲ ಎಂದು ದುಂಡಳ್ಳಿ ಗ್ರಾ.ಪಂ. ನಿರ್ಣಯಿಸಿದೆ.

ದುಂಡಳ್ಳಿ ಗ್ರಾ.ಪಂ. ಆಡಳಿತ ಮಂಡಳಿ ಕಚೇರಿಯಲ್ಲಿ ನಡೆದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿದ್ದ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್ ಮಾತನಾಡಿ, ಶನಿವಾರಸಂತೆ ಪಂಚಾಯಿತಿಯವರಿಗೆ ಯಾವದೇ ಕಾರಣಕ್ಕೂ ನಮ್ಮ ಪಂಚಾಯಿತಿಗೆ ಸೇರಿದ ಜಾಗದಲ್ಲಿ ಕಸ ವಿಲೇವಾರಿ ಮಾಡಲು ಅವಕಾಶ ಮಾಡಿ ಕೊಡುವದಿಲ್ಲ ಎಂದರು. ಪಂಚಾಯಿತಿ ಸರ್ವ ಸದಸ್ಯರು ಹಾಗೂ ದುಂಡಳ್ಳಿ ಗ್ರಾಮದ ಗ್ರಾಮಸ್ಥರು ತೀವ್ರವಾಗಿ ವಿರೋಧಿಸಿದರು. ದುಂಡಳ್ಳಿ ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ಹಾಗೂ ನಿವೇಶನ ರಹಿತರಿಗೆ ಜಾಗವನ್ನು ಮಾದ್ರೆಹೊಸಳ್ಳಿ ಗ್ರಾಮದಲ್ಲಿ ಜಾಗವನ್ನು ಗುರುತಿಸಿ ಈ ಹಿಂದೆಯೇ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಗಿದೆ. ಆದ್ದರಿಂದ ಯಾವದೇ ಕಾರಣಕ್ಕೂ ಕಸ ವಿಲೇವಾರಿಗೆ ಜಾಗ ಬಿಟ್ಟುಕೊಡುವದಿಲ್ಲ ಎಂದು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಒಂದು ವೇಳೆ ಇದನ್ನು ಮೀರಿ ಶನಿವಾರಸಂತೆ ಪಂಚಾಯಿತಿಯವರು ದುಂಡಳ್ಳಿ ಪಂಚಾಯಿತಿಯ ಒಳಗೆ ಕಸ ವಿಲೇವಾರಿ ಮಾಡಿದ್ದಲ್ಲಿ ಹೋರಾಟ ಮಾಡುವದಾಗಿ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸುವಂತೆ ತೀರ್ಮಾನಿಸಲಾಯಿತು.

ದುಂಡಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ವರಮಾನ ಬರುವಂತ ಅನೇಕ ಸಂಘ-ಸಂಸ್ಥೆಗಳ ಕಂದಾಯಗಳನ್ನು ಶನಿವಾರಸಂತೆ ಪಂಚಾಯಿತಿ ಪಡೆದುಕೊಳ್ಳುತ್ತಿದ್ದು, ಆದ್ದರಿಂದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಚಿಕ್ಕಕೊಳ್ಳತ್ತೂರು, ಹೆಮ್ಮನೆ ಗ್ರಾಮಗಳ ಸಂಪೂರ್ಣ ಗಡಿಯನ್ನು ಸರ್ವೆ ಮಾಡಿಸಿ, ಗುರುತಿಸಿ ಕೊಡುವಂತೆ ಸರ್ವೆ ಅಧಿಕಾರಿ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ರೂಪಾ, ಸದಸ್ಯರುಗಳಾದ ನೇತ್ರಾವತಿ, ಪಾರ್ವತಿ, ಕಮಲಮ್ಮ, ಬಿಂದಮ್ಮ, ಯೋಗೇಂದ್ರ, ಸಂತೋಷ್, ಸಂದೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಕಂಪ್ಯೂಟರ್ ನಿರ್ವಾಹಕಿ ಪೂರ್ಣಿಮ ಉಪಸ್ಥಿತರಿದ್ದರು. ವೇಣುಗೋಪಾಲ್ ಸ್ವಾಗತಿಸಿ, ವಂದಿಸಿದರು.