ಶನಿವಾರಸಂತೆ, ಆ. 12: ಶನಿವಾರಸಂತೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2015-16ನೇ ಸಾಲಿನ ವಾರ್ಷಿಕ ಮಹಾಸಭೆ ಸ್ಥಳೀಯ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಸ್.ಸಿ. ಶರತ್ ಶೇಖರ್ ವಹಿಸಿದ್ದರು. ಮಾರಾಟ ಸಹಕಾರ ಸಂಘದಲ್ಲಿ ಮಾರಾಟ ಮಾಡಲಾಗುವ ಎಲ್ಲಾ ರೀತಿಯ ಕೃಷಿಗೆ ಸಂಬಂಧಿಸಿದ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ದೊರೆಯುತ್ತಿದೆ. ಸಂಘದಲ್ಲಿ ಗೊಬ್ಬರ ಮಾರಾಟ, ಕ್ರಿಮಿನಾಶಕ ಮಾರಾಟ, ಆಹಾರ ಪದಾರ್ಥ, ಕೋವಿ ತೋಟಗಳು ಹಾಗೂ ಇತರೆ ವ್ಯಾಪಾರ ವಹಿವಾಟುವಿನಿಂದ ಸಂಘವು ಈ ಸಾಲಿನಲ್ಲಿ 8,06,244 ರೂಪಾಯಿಗಳ ನಿವ್ವಳ ಲಾಭ ಗಳಿಸಿದೆ. ಸಂಘವು ಇತ್ತೀಚಿನ ದಿನಗಳಲ್ಲಿ ಲಾಭದಲ್ಲಿ ಮುನ್ನಡೆಯುತ್ತಿದ್ದು, ಪ್ರಮುಖ ಗೊಬ್ಬರ ಕಂಪೆನಿಗಳ ಡೀಲರ್ ಶಿಪ್ ಪಡೆದುಕೊಳ್ಳಲಾಗಿದೆ ಹಾಗೂ ಇದರ ಮೂಲಕ ಗೊಬ್ಬರ ವ್ಯಾಪಾರ ಹೆಚ್ಚಿಸಿಕೊಳ್ಳಲಾಗಿದೆ. ಸಂಘವು ಅಭಿವೃದ್ಧಿಗೊಂಡು ಪ್ರಗತಿಯತ್ತ ಸಾಗಲು ಸದಸ್ಯರು ಪೂರ್ಣ ಸಹಕಾರ ನೀಡಿ ಸಹಕರಿಸಬೇಕಾಗಿ ತಿಳಿಸಿದರು.

ಸಂಘದ ವತಿಯಿಂದ 2016ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಹೆಚ್.ಸಿ. ದೀಪಕ್, ನಿರ್ದೇಶಕರು ಗಳಾದ ಗಿರಿಜಾ ಕರುಣಾಕರ್, ದೇವಾಂಬಿಕ ಮಹೇಶ್, ಬಿ.ಡಿ. ಧರ್ಮಪ್ಪ, ಹೆಚ್.ಎಸ್. ಸುಬ್ಬಪ್ಪ, ರಾಜು, ಓ.ವಿ. ಶುಕ್ಲಾಂಬರ, ಬಿ.ಎಸ್. ಮಂಜುನಾಥ್, ಹೆಚ್.ವಿ. ಮಹಾಂತಪ್ಪ, ಜಿ.ಜಿ. ಪರಮೇಶ್, ಎಸ್.ಜೆ. ರವಿಕುಮಾರ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು. ಪ್ರಬಾರ ವ್ಯವಸ್ಥಾಪಕ ಎನ್.ಪಿ. ಶಿವರಾಜು ವಾರ್ಷಿಕ ವರದಿ ಮಂಡಿಸಿ, ನಿರ್ದೇಶಕ ಡಿ.ಬಿ. ಧರ್ಮಪ್ಪ ಸ್ವಾಗತಿಸಿ, ನಿರ್ದೇಶಕ ಶುಕ್ಲಾಂಬರ ವಂದಿಸಿದರು.