ಕುಶಾಲನಗರ, ಸೆ. 18: ಕುಶಾಲನಗರದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ 2015-16ನೇ ಸಾಲಿನಲ್ಲಿ ರೂ. 7.51 ಕೋಟಿ ವಹಿವಾಟು ನಡೆಸುವ ಮೂಲಕ ರೂ. 47.95 ಲಕ್ಷ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಬಿ. ಚಂದ್ರಪ್ಪ ತಿಳಿಸಿದರು.

ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂಘ ಸೋಮವಾರಪೇಟೆ ತಾಲೂಕಿಗೆ ಪಡಿತರ ವಿತರಣೆಯ ಸಗಟು ವಾರಸುದಾರರಾಗಿ ಕಾರ್ಯನಿರ್ವಹಿಸುತ್ತಿದ್ದು, 100 ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ವಿತರಣೆ ನಡೆಸುತ್ತಿದೆ. ಕುಶಾಲನಗರದಲ್ಲಿ ವ್ಯಾಪಾರ ಸಂಕೀರ್ಣದಲ್ಲಿ ಗ್ರಾಹಕರ ಶಾಖೆ, ಸ್ಟೇಷನರಿ, ಜನತಾ ಬಜಾರ್, ಮೆಡಿಕಲ್ ಕಾರ್ಯನಿರ್ವಹಿಸುತ್ತಿವೆ. ಇದರೊಂದಿಗೆ 2 ಸುಸ್ಸಜ್ಜಿತ ಸಭಾಂಗಣ ಕೂಡ ಹೊಂದಲಾಗಿದೆ ಎಂದು ತಿಳಿಸಿದರು.

1101 ಸಂಖ್ಯೆಯ ಸದಸ್ಯ ಬಲದೊಂದಿಗೆ ಸಂಘ ರೂ. 10.95 ಲಕ್ಷ ಪಾಲು ಬಂಡವಾಳ ಹೊಂದಿದ್ದು, ರೂ. 26.26 ಲಕ್ಷ ನಿವ್ವಳ ಲಾಭ ಗಳಿಸಿದೆ. ರೂ. 606.12 ಲಕ್ಷ ಠೇವಣಿ ಹೊಂದಿದ್ದು, ಶೇ. 4, 9 ರಷ್ಟು ಠೇವಣಿ ಬಡ್ಡಿದರ ನೀಡಲಾಗುತ್ತಿದೆ. ರೂ. 604.50 ಲಕ್ಷದಷ್ಟು ಚಿನ್ನಾಭರಣ, ಪಿಗ್ಮಿ ಓಡಿ, ವಾಹನ ಸಾಲ ವಿತರಿಸಲಾಗಿದೆ. ರೈತ ಸಹಕಾರ ಭವನದ ಆವರಣದ ಜಾಗದಲ್ಲಿ ರೈತರಿಗೆ ಅನುಕೂಲ ವಾಗುವಂತೆ ಎನ್.ಸಿ.ಡಿ.ಸಿ.ಯ ಆರ್ಥಿಕ ಸೌಲಭ್ಯದೊಂದಿಗೆ ರೂ. 31.20 ಲಕ್ಷ ವೆಚ್ಚದಲ್ಲಿ ಗೋದಾಮು ಮತ್ತು ರೂ. 18.20 ಲಕ್ಷ ವೆಚ್ಚದಲ್ಲಿ ವಸತಿ ಗೃಹಗಳನ್ನು ನಿರ್ಮಾಣ ಕಾರ್ಯ ಕೈಗೊಳ್ಳಲಾಗುವದು ಎಂದು ತಿಳಿಸಿದರು. ಸಂಘದ 2015-16ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ತಾ. 20 ರಂದು ಪೂರ್ವಾಹ್ನ 10.30 ಗಂಟೆಗೆ ಸಂಘದ ರೈತ ಸಹಕಾರ ಭವನದಲ್ಲಿ ನಡೆಯಲಿದೆ. ಸಭೆಯಲ್ಲಿ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ವಿತರಿಸಲಾಗುವದು ಎಂದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಟಿ.ಕೆ. ರಘು, ನಿರ್ದೇಶಕರಾದ ಕೆ.ಎಂ. ಪ್ರಸನ್ನ, ಟಿ.ಬಿ. ಜಗದೀಶ್, ಆರ್.ಕೆ. ಚಂದ್ರು, ಎಸ್.ಟಿ. ಕೃಷ್ಣರಾಜು, ಬಿ. ಸರೋಜ, ಬಿ.ಎಸ್. ಚಂದ್ರಶೇಖರ್, ಕಾರ್ಯದರ್ಶಿ ಬಿ.ಎಂ. ಪಾರ್ವತಿ ಇದ್ದರು.