ಮಡಿಕೇರಿ, ಜೂ. 28: ವೈದ್ಯರ ನಿರ್ಲಕ್ಷ್ಯದಿಂದಾಗಿ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ, ಮೃತ ಬಾಲಕಿಯ ಸಂಬಂಧಿಕರು, ಸಾರ್ವಜನಿಕರು ಹಾಗೂ ಸಂಘಟನೆಗಳೊಡಗೂಡಿ ಆಸ್ಪತ್ರೆ ಎದುರು ಪ್ರತಿಭಟಿಸಿದ ಪ್ರಕರಣ ಇಂದು ನಡೆಯಿತು. ವೈದ್ಯರ ವಿರುದ್ಧ ಪ್ರಕರಣ ದಾಖಲಿಸುವದಾಗಿ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪರಿಸ್ಥಿತಿ ತಿಳಿಗೊಂಡಿತು.

ಕಣಿವೆ ಗ್ರಾಮ ನಿವಾಸಿ, ಮೋಹನ್ ಎಂಬವರ ಪುತ್ರಿ ಮಮತಾ (16) ಎಂಬಾಕೆಯನ್ನು ಕಳೆದ ತಾ. 1 ರಂದು ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ಕರೆತಂದ ಸಂದರ್ಭ ಆಕೆಯನ್ನು ಪರೀಕ್ಷಿಸಿದ ವೈದ್ಯರಾದ ಡಾ. ಪ್ರಕಾಶ್ ಎಂಬವರು ಒಳರೋಗಿ ಯಾಗಿ ದಾಖಲಾಗುವಂತೆ ಸೂಚಿಸಿದ್ದರು. ನಂತರ ಆಕೆಗೆ ಅಪೆಂಡಿಸೈಟಿಸ್ ಇರುವದಾಗಿ ಹೇಳಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಆದರೂ ಚೇತರಿಕೆ ಕಾಣದ್ದರಿಂದ ಕೆಲ ದಿನಗಳ ನಂತರ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಲಾಗಿದೆ.

15 ದಿವಸಗಳು ಕಳೆದರೂ ಆಕೆ ಗುಣಮುಖವಾಗದ ಹಿನ್ನೆಲೆಯಲ್ಲಿ ತಾ. 18 ರಂದು ಸಾರ್ವಜನಿಕರು, ಸಂಘ - ಸಂಸ್ಥೆಗಳ ನೆರವಿನೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಪರಿಶೀಲಿಸಿದ ಸಂದರ್ಭ ಶಸ್ತ್ರಚಿಕಿತ್ಸೆ ನಡೆಸಿದ ಜಾಗ ಹಾಗೂ ಹೊಟ್ಟೆ ಒಳಗಡೆ ಗ್ಯಾಂಗ್ರಿನ್‍ನಿಂದಾಗಿ ಸಂಪೂರ್ಣ ಕೊಳೆತು ಹೋಗಿದ್ದು, ಎಲ್ಲಾ ರೀತಿಯ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. ಆಕೆಯ ಸಾವಿಗೆ ವೈದ್ಯ ಪ್ರಕಾಶ್ ಅವರೇ ಕಾರಣರಾಗಿದ್ದು, ಅವರನ್ನು ಬಂಧಿಸಿ ಕ್ರಮ ಕೈಗೊಳ್ಳುವದಲ್ಲದೆ ಮೃತರ ಕುಟುಂಬಕ್ಕೆ ಹಾಗೂ ಆಸ್ಪತ್ರೆಗೆ ವೆಚ್ಚವಾದ ಹಣ ಹಿಂತಿರುಗಿಸ ಬೇಕೆಂದು ಸಂಬಂಧಿಕರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ವೈದ್ಯರು ತರಾಟೆಗೆ

ಪ್ರತಿಭಟನಾ ಸ್ಥಳಕ್ಕೆ ಬಂದ ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ವೈದ್ಯಕೀಯ ಕಾಲೇಜಿನ ನಿರ್ದೇಶಕ ಮಹೇಂದ್ರ ಹಾಗೂ ವೈದ್ಯರುಗಳು ಪ್ರತಿಭಟನಾಕಾರರನ್ನು ಸಮಾಧಾನಿಸಲು ಯತ್ನಿಸಿದರು. ಒಂದು ಹಂತದಲ್ಲಿ ವೈದ್ಯರಿಂದ ಯಾವದೇ ತಪ್ಪಾಗಿಲ್ಲ ಎಂದಾಗ ಪ್ರತಿಭಟನಾಕಾರರು ರೊಚ್ಚಿಗೆದ್ದ ಪ್ರಸಂಗ ಎದುರಾಯಿತು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ಉನ್ನತಾಧಿಕಾರಿಗಳು, ಜಿಲ್ಲಾ ಸರ್ಜನರು ಆಗಮಿಸುವಂತೆ ಪಟ್ಟು ಹಿಡಿದರು. ಇಲ್ಲವಾದಲ್ಲಿ ರಸ್ತೆ ತಡೆ ನಡೆಸುವ ಬಗ್ಗೆ ಎಚ್ಚರಿಸಿದರು.

ಕ್ರಮದ ಭರವಸೆ

ಆ ಬಳಿಕ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಸತೀಶ್‍ಕುಮಾರ್ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರುಗಳು ಆಗಮಿಸಿ, ಮೃತಳ ಸಂಬಂಧಿಕರು ಹಾಗೂ ಪ್ರತಿಭಟನಾ ಕಾರರ ಪ್ರಮುಖರೊಂದಿಗೆ ಜಿಲ್ಲಾ ಶಸ್ತ್ರ ಚಿಕಿತ್ಸಕರ ಕಚೇರಿಯಲ್ಲಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಬಾಲಕಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡ ಬಳಿಕ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿಲ್ಲ. ಎರಡೆರಡು ಬಾರಿ ಶಸ್ತ್ರ ಚಿಕಿತ್ಸೆ ಮಾಡಿದ್ದು, ಶಸ್ತ್ರ ಚಿಕಿತ್ಸೆ ಮಾಡಿದ ಜಾಗದಲ್ಲಿ ಮಲ ವಿಸರ್ಜನೆಯಾಗು ತ್ತಿದ್ದುದನ್ನು ಗಮನಿಸಿ ನಾವುಗಳು ಮಂಗಳೂರಿಗೆ ದಾಖಲಿಸಿದೆವು. ಅಲ್ಲದೆ, ವೈವಸ್ ಆಸ್ಪತ್ರೆಗೆ ರೂ. 75 ಸಾವಿರ ಮೊತ್ತದ ಔಷಧಿಗೆ ಬರೆದುಕೊಟ್ಟಿದ್ದಾರೆ. ಶಸ್ತ್ರಚಿಕಿತ್ಸೆಗೂ ರೂ. 5 ಸಾವಿರ ಹಣ ಪಡೆದು ಕೊಂಡಿದ್ದಾರೆಂದು ಆರೋಪಿಸಿದರು. ಆಸ್ಪತ್ರೆಯಲ್ಲಿ ಔಷಧಿ ವಿಚಾರದಲ್ಲಿ ದಂಧೆ ನಡೆಯುತ್ತಿದೆ. ಆಸ್ಪತ್ರೆಯ ನೌಕರ ಔಷಧಿ ಅಂಗಡಿ ನಡೆಸುತ್ತಿದ್ದು, ಇಲ್ಲಿಯ ಔಷಧಿಗಳು ಅಲ್ಲಿ ಮಾರಾಟವಾಗುತ್ತಿವೆ. ಮೊಟ್ಟೆ ಸರಬರಾಜಿನಲ್ಲೂ ಅವ್ಯವಹಾರ ನಡೆಯುತ್ತಿದೆ ಎಂದು ದೂರಿದರು. ಬಹುತೇಕ ಸರಕಾರಿ ವೈದ್ಯರು ಕರ್ತವ್ಯಕ್ಕೆ ಸಹಿ ಮಾಡಿ ನಂತರ ಖಾಸಗಿ ಕ್ಲಿನಿಕ್‍ನಲ್ಲಿ ಕೆಲಸ ಮಾಡುತ್ತಾರೆ. ಕ್ಲಿನಿಕ್‍ಗಳನ್ನು ಮುಚ್ಚಿಸಬೇಕು. ಬಾಲಕಿಯ ಸಾವಿಗೆ ಕಾರಣಕರ್ತರಾಗಿರುವ ವೈದ್ಯರ ವಿರುದ್ಧ ಮೊಕದ್ದಮೆ ದಾಖಲಿಸಿ, ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಔಷಧಿಯ ಕೊರತೆ ಇರುವ ಬಗ್ಗೆ ವೈದ್ಯಾಧಿಕಾರಿ ಡಾ. ಅಜೀಜ್ ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಸತೀಶ್‍ಕುಮಾರ್ ಅವರು, ವೈದ್ಯರು ಕರ್ತವ್ಯದ ಸಮಯದಲ್ಲಿ ಕ್ಲಿನಿಕ್‍ನಲ್ಲಿದ್ದರೆ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ವೈದ್ಯರ ಕೆಲಸ ದೇವರ ಕೆಲಸ, ವೈದ್ಯರನ್ನು ನಂಬಿ ಜನರು ಬರುತ್ತಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸ ಲಾಗುವದು. ನಂತರ ವೈದ್ಯಕೀಯ ಮಂಡಳಿಯಿಂದ ಪರಿಶೀಲನೆ ನಡೆಸಿ ವೈದ್ಯರು ತಪ್ಪೆಸಗಿರುವದು ಕಂಡು ಬಂದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವದೆಂದು ಹೇಳಿದರು. ಅಲ್ಲದೆ, ಆಸ್ಪತ್ರೆಯ ಸಮಸ್ಯೆ ಬಗ್ಗೆ ಎರಡು ದಿನದಲ್ಲಿ ಸಭೆ ಏರ್ಪಡಿಸುವಂತೆ ಅಪರ ಜಿಲ್ಲಾದಿ üಕಾರಿಗೆ ಸೂಚಿಸಿದರಲ್ಲದೆ, ಸರಕಾರದ ಮಟ್ಟದಲ್ಲಿ ಪರಿಹರಿಸಲು ಪ್ರಯತ್ನಿಸು ವದಾಗಿ ಹೇಳಿದರು.

ಪೊಲೀಸ್ ಉನ್ನತಾಧಿಕಾರಿ ಡಾ. ರಾಜೇಂದ್ರ ಪ್ರಸಾದ್ ಅವರು, ಮೃತ ಬಾಲಕಿಯ ತಂದೆ ನೀಡಿರುವ ದೂರಿನ ಆಧಾರದಲ್ಲಿ ಮೊಕದ್ದಮೆ ದಾಖಲಿಸ ಲಾಗುವದು ಎಂದು ಹೇಳಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂತೆಗೆದು ಕೊಂಡರು. ನಂತರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು.

ನೆರವಿನ ಹಸ್ತ

ಇದೇ ಸಂದರ್ಭ ಆರೋಗ್ಯ ರಕ್ಷಾ ಸಮಿತಿಯಿಂದ ರೂ. 5 ಸಾವಿರವನ್ನು ಅಪರ ಜಿಲ್ಲಾಧಿಕಾರಿ ಗಳು ವೃತಳ ಕುಟುಂಬಸ್ಥರಿಗೆ ನೀಡಿದರು. ಸುನಿಲ್ ಸುಬ್ರಮಣಿ ಅವರು ರೂ. 4,500 ವೈಯಕ್ತಿಕ ವಾಗಿ ನೀಡಿದರೆ, ಸಂಘ - ಸಂಸ್ಥೆಗಳ ಪ್ರಮುಖರು ಇನ್ನಷ್ಟು ಹಣ ಸಂಗ್ರಹ ಮಾಡಿ ಕುಟುಂಬಸ್ಥರಿಗೆ ನೀಡಿದರು. ವಿವಿಧ ಸಂಘಟನೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.