ಮಡಿಕೇರಿ, ಡಿ. 9 : ಜಿಲ್ಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ಬಸ್ಗಳ ಸಂಚಾರಕ್ಕೆ ಈ ಹಿಂದೆ ನಿಗದಿಯಾದ ವೇಳಾಪಟ್ಟಿ ಮತ್ತು ರಹದಾರಿಯನ್ನು ನಿಯಮಾನುಸಾರ ಪಾಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಬಸ್ ಮಾಲೀಕರಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಸೂಚಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಖಾಸಗಿ ಬಸ್ ಮಾಲೀಕರುಗಳು ಹಾಗೂ ಕ.ರಾ.ರ.ಸಾ. ಸಂಸ್ಥೆಯ ಅಧಿಕಾರಿಗಳು ಅವರವರ ವಾಹನಗಳಿಗೆ ರಹದಾರಿ ಹೊಂದಿ ಕೊಂಡಿರುವ ಪ್ರಕಾರ ವಾಹನ ಓಡಿಸುವಂತೆ ಮತ್ತು ಮಾರ್ಗ ಮೊಟಕುಗೊಳಿಸುವದು ಅಥವಾ ವೇಳಾಪಟ್ಟಿ ಉಲ್ಲಂಘಿಸಿ ಓಡಿಸುವ ಮೂಲಕ ವಿಶೇಷವಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಉಂಟು ಮಾಡಬಾರದು. ಹಾಗೆಯೇ ರಹದಾರಿ ಷರತ್ತು ಉಲ್ಲಂಘಿಸುವ ವಾಹನಗಳ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.
ಸಾರ್ವಜನಿಕರಿಗೆ ಅನಾನುಕೂಲ ಉಂಟಾಗುವದನ್ನು ತಪ್ಪಿಸಲು ಎಲ್ಲಾ ವಾಹನ ಮಾಲೀಕರು ಹಾಗೂ ಕ.ರಾ.ರ.ಸಾ.ಸಂಸ್ಥೆ ಅಧಿಕಾರಿಗಳು ಅವರ ವಾಹನಗಳಿಗೆ ಹೊಂದಿರುವ ದಾಖಲಾತಿಗಳನ್ನು ಕ್ರಮಬದ್ಧವಾಗಿಟ್ಟು ಕೊಂಡು ರಹದಾರಿಯಲ್ಲಿ ಹೇಳಲಾಗಿರುವ ಮಾರ್ಗ ಮತ್ತು ವೇಳಾಪಟ್ಟಿಯಂತೆ ವಾಹನ ನಿರ್ವಹಿಸ ಬೇಕು ಎಂದು ಸೂಚಿಸಿದರು.
ಮಡಿಕೇರಿ ನಗರದಲ್ಲಿ ಸಿಟಿ ಬಸ್ ಸೌಲಭ್ಯ ಕಲ್ಪಿಸುವ ಸಂಬಂಧ ಈಗಾಗಲೇ ಪ್ರಾಯೋಗಿಕವಾಗಿ ಸಿಟಿ ಬಸ್ ಸಂಚಾರಕ್ಕೆ ಅವಕಾಶ ಮಾಡಲಾಗಿತ್ತು, ಆದರೆ ಬಸ್ ಸಂಚಾರ ವ್ಯವಸ್ಥೆ ನಿರ್ವಹಿಸದೇ ಇರುವದರಿಂದ ಹೊಸದಾಗಿ ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಮತ್ತೆ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.
ಖಾಸಗಿ ಬಸ್ ಮಾಲಿಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಅವರು ಕೆ.ಎಸ್.ಆರ್. ಟಿ.ಸಿ. ಬಸ್ಗಳು ಪರವಾನಗಿ ಇಲ್ಲದೆ ಜಿಲ್ಲೆಯಲ್ಲಿ ಓಡಾಡುತ್ತಿವೆ. ಈ ಸಂಬಂಧ ಪ್ರತೀ ಸಭೆಯ ಗಮನಕ್ಕೆ ತರಲಾಗಿದೆ ಎಂದರು.
ಜಿಲ್ಲೆಯಾದ್ಯಂತ ಕೆ.ಎಸ್.ಆರ್. ಟಿ.ಸಿ ಮತ್ತು ಖಾಸಗಿ ಬಸ್ಗಳ ಸಂಚಾರದ ಸಮಯದಲ್ಲಿ ಅಂತರವಿರಬೇಕು. ಇಲ್ಲದಿದ್ದಲ್ಲಿ ಬಸ್ ಸಂಚಾರಕ್ಕೆ ಪರವಾನಿಗೆ ನೀಡಬಾರದು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ದೂರುಗಳ ಸಂಬಂಧ ಶೀಘ್ರ ಸಮಸ್ಯೆ ಇತ್ಯರ್ಥಪಡಿಸುವಂತೆ ಕೆ.ಎಸ್.ಆರ್. ಟಿ.ಸಿ ಅಧಿಕಾರಿಗೆ ಸೂಚಿಸಿದರು.
ಬಸ್ ಮಾಲಿಕರ ಸಂಘದ ಕಾರ್ಯದರ್ಶಿ ಬಿ.ಟಿ.ಪೂಣಚ್ಚ ಮಾತನಾಡಿ, ಮಡಿಕೇರಿ ನಗರಕ್ಕೆ ಪ್ರವಾಸಿಗರ ವಾಹನಗಳು ಹೆಚ್ಚು ಆಗಮಿಸುತ್ತಿರುವದರಿಂದ ನಗರ ವ್ಯಾಪ್ತಿಯಲ್ಲಿ ವಾಹನ ಪಾರ್ಕಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತದಿಂದ ಕ್ರಮ ಆಗಬೇಕು ಎಂದು ತಿಳಿಸಿದರು.
ಸಭೆಯ ಆರಂಭಕ್ಕೂ ಮುನ್ನ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು. ಈ ಸಂದರ್ಭ ಕೆ.ನಿಡುಗಡೆ ಗ್ರಾಮದ ಎಂ.ಬಿ.ಸುಬ್ಬಯ್ಯ ಮಾತನಾಡಿ, ಅಭಿಪಾಲ್ಸ್ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಬಸ್ಗಳ ಸಂಚಾರ ಸ್ಥಗಿತವಾಗಿದೆ. ಇದರಿಂದ ಸಾರ್ವಜನಿಕರು, ಪ್ರಾವಸಿಗರು ತೊಂದರೆ ಅನುಭವಿಸುತ್ತಿದ್ದಾರೆ ಹಾಗೂ ಕೆಲವು ಖಾಸಗಿ ವಾಹನಗಳು 1 ಕಿ.ಮೀ. 50 ರೂ. ಕೊಡುವಂತೆ ಕೇಳುತ್ತಾರೆ ಎಂದು ತಿಳಿಸಿದರು.
ಮೂರ್ನಾಡಿನ ಸೂರತ್ ತಮ್ಮಯ್ಯ ಮಾತನಾಡಿ, ಮೂರ್ನಾಡಿನಲ್ಲಿ
(ಮೊದಲ ಪುಟದಿಂದ) ಟ್ರಾಫಿಕ್ ಸಮಸ್ಯೆ ವಿಪರಿತವಾಗಿ ಕಂಡುಬರುತ್ತಿದೆ. ಇದರ ಜೊತೆಗೆ ಮೂರ್ನಾಡಿನ ಪೆಟ್ರೋಲ್ ಬಂಕ್ನ ಹತ್ತಿರ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.
ಕಾಲೂರು ಗ್ರಾಮದ ರಾಜ್ ತಮ್ಮಯ್ಯ ಮಾತನಾಡಿ, ಮಾಂದಲ್ ಪಟ್ಟಿ ಗೇಟ್ವರೆಗೆ ಬಸ್ ಸಂಚಾರ ಆರಂಭಿಸುವಂತೆ ಆಗಬೇಕು ಹಾಗೂ ಕೇರಳದಿಂದ ಸುಮಾರು 30 ರಿಂದ 50 ಟನ್ಗಳವರೆಗೆ ಹೆಚ್ಚು ಸರಕುಗಳನ್ನು ಹೊಂದಿರುವ ಬಾರೀ ವಾಹನಗಳು ಜಿಲ್ಲೆಯಾದ್ಯಂತ ಸಂಚರಿಸುತ್ತಿವೆ. ಇದರಿಂದ ಮುಖ್ಯ ರಸ್ತೆಗಳು ಹಾಳಾಗುತ್ತಿವೆ. ಗಡಿ ಭಾಗಗಳಲ್ಲಿನ ಚೆಕ್ ಪೋಸ್ಟ್ಗಳಲ್ಲಿ ಭದ್ರತೆಯನ್ನು ಸರಿಯಾಗಿ ನಿರ್ವಹಿಸುವಂತೆ ಸಭೆಯ ಗಮನಕ್ಕೆ ತಂದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಅವರು ಜಿಲ್ಲೆಯ ಪ್ರವಾಸಿ ತಾಣಗಳಾದ ಭಾಗಮಂಡಲ, ತಲಕಾವೇರಿ, ಅಬ್ಬಿಪಾಲ್ಸ್ ಬಸ್ ಸೌಕರ್ಯ ಮತ್ತು ಮಡಿಕೇರಿಯಿಂದ ಅಬ್ಬಿಪಾಲ್ಸ್ ಮಾರ್ಗವಾಗಿ ನಗರ ಸಂಚಾರ ರಹದಾರಿ ಆರಂಭಿಸುವಂತೆ ಪ್ರವಾಸೋದ್ಯಮ ಇಲಾಖೆಗೆ ತಿಳಿಸಿಲಾಗಿದೆ. ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಸೂಕ್ತ ರಹದಾರಿ ಅನ್ವಯ ಬಸ್ ವ್ಯವಸ್ಥೆಯನ್ನು ಪ್ರಾರಂಭಿಸುವಂತಾಗ ಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಪ್ರಾದೇಶಿಕ ಸಾರಿಗೆ ಕಾರ್ಯದರ್ಶಿ ಫೆಲಿಕ್ಸ್ ಡಿಸೋಜ, ಕೆ.ಎಸ್.ಆರ್.ಟಿ.ಸಿ ಕಾನೂನು ಅಧಿಕಾರಿ ಸಹನ ಎಂ., ಪ್ರಾದೇಶಿಕ ಸಾರಿಗೆ ಇಲಾಖೆಯ ವ್ಯವಸ್ಥಾಪಕ ಶಿವಣ್ಣ ಮತ್ತಿತರರು ಇದ್ದರು.