ವೀರಾಜಪೇಟೆ, ಸೆ.15: ವ್ಯವಸ್ಥಿತವಾಗಿ ಶತಮಾನಗಳಿಂದಲು ಆಚರಿಸಿಕೊಂಡು ಬಂದಿರುವ ಇತಿಹಾಸ ಪ್ರಸಿದ್ಧ ಗೌರಿ ಗಣೇಶೋತ್ಸವದ ವಿಸರ್ಜನೋತ್ಸವವು ಅನಂತ ಪದ್ಮನಾಭ ವೃತದ ದಿನವಾದ ಇಂದು ರಾತ್ರಿ 20 ಮಂಟಪಗಳ ಸಾಮೂಹಿಕ ಅದ್ಧೂರಿಯ ಮೆರವಣಿಗೆ ನಡೆದು ಶುಕ್ರವಾರ ಬೆಳಿಗ್ಗೆ ಇಲ್ಲಿನ ಖಾಸಗಿ ಬಸ್ಸು ನಿಲ್ದಾಣದ ಬಳಿಯಿರುವ ಪವಿತ್ರ ಗೌರಿಕೆರೆಯಲ್ಲಿ ಮೂರ್ತಿಗಳ ವಿಸರ್ಜನೆ ಶ್ರದ್ಧಾ ಭಕ್ತಿಯಿಂದ ಸಾಂಪ್ರದಾಯಿಕವಾಗಿ ನಡೆಯಿತು.ವೀರಾಜಪೇಟೆ ಗಡಿಯಾರ ಕಂಬದ ಬಳಿಯಿರುವ ಗಣಪತಿ ದೇವಾಲಯದ ಗಣಪತಿ ಸೇವಾ ಟ್ರಸ್ಟ್ ವತಿಯಿಂದ ಶುಭ ಲಗ್ನದಲ್ಲಿ ಗಣಪತಿಯನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಕೂರಿಸಿ ಪೂಜೆ ಸಲ್ಲಿಸಿದ ನಂತರ ರಾತ್ರಿ 9-45 ಗಂಟೆಗೆ ಪ್ರಥಮವಾಗಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಗೆ ಚಾಲನೆ ನೀಡುವ ಮೊದಲು ರಾತ್ರಿ 8-30ಗಂಟೆಗೆ ನಡೆದ ಸಿಡಿ ಮದ್ದು ಪ್ರದರ್ಶನ ಮೆರವಣಿಗೆಗೆ ವಿಶೇಷ ಆಕರ್ಷಣೆಯಾಗಿತ್ತು. ಮಂಟಪದಲ್ಲಿ ಗಣಪತಿಗೆ ಪೂಜೆ ಸಲ್ಲಿಸಿದ ನಂತರ ಭಕ್ತಾದಿಗಳಿಂದ ಈಡುಗಾಯಿಯ ಮಹಾಪೂರವೇ ಹರಿಯಿತು.

ಜೈನರ ಬೀದಿಯ ಬಸವೇಶ್ವರ ದೇವಾಲಯದಲ್ಲಿಯು ರಾತ್ರಿ 8 ಗಂಟೆಗೆ ಸಿಡಿಮದ್ದು ಪ್ರದರ್ಶನ ಏರ್ಪಡಿಸ ಲಾಗಿತ್ತು. ಗಣಪತಿ ದೇವಾಲಯದ ಮಂಟಪÀ ಬಸವೇಶ್ವರ ದೇವಾಲಯಕ್ಕೆ ತಲಪುತ್ತಲೇ

(ಮೊದಲ ಪುಟದಿಂದ) ವಿವಿಧೆಡೆಗಳಿಂದ ಬಂದ ಮಂಟಪಗಳು ಇದನ್ನು ಸರದಿ ಪ್ರಕಾರ ಹಿಂಬಾಲಿಸಿದವು. ಮೊದಲ ಸರದಿಯ ಮಂಟಪಗಳು ತೆಲುಗರ ಬೀದಿ ಮಾರ್ಗವಾಗಿ ರಾತ್ರಿ 2 ಗಂಟೆಗೆ ಸಿದ್ದಾಪುರ ರಸ್ತೆ ತಲಪಿ ನಂತರ ಅದೇ ಮಾರ್ಗವಾಗಿ ಹಿಂದಿರುಗಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ, ಮುಖ್ಯರಸ್ತೆ ಮಾರ್ಗವಾಗಿ ಖಾಸಗಿ ಬಸ್ಸು ನಿಲ್ದಾಣದ ಬಳಿಯಿರುವ ಗೌರಿಕೆರೆಯನ್ನು ಬೆಳಗ್ಗಿನ 5.30 ಗಂಟೆಗೆ ತಲಪಿ ಸರದಿ ಪ್ರಕಾರ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವ ಜರುಗಿತು. ಮೆರವಣಿಗೆಯಲ್ಲಿ ಸಾಗಿ ಬಂದ ಇಪ್ಪತ್ತು ಮಂಟಪಗಳಲ್ಲಿದ್ದ ಮೂರ್ತಿಗಳ ವಿಸರ್ಜನೋತ್ಸವ ಬೆಳಗ್ಗಿನ ಎಂಟು ಗಂಟೆಯವರೆಗೂ ನಡೆಯಿತು. ಮೂರ್ತಿಗಳ ವಿಸರ್ಜನೆಯ ತನಕವೂ ಪೊಲೀಸ್ ಬಂದೋಬಸ್ತ್ ಮುಂದುವರೆದಿತ್ತು.

ಮೆರವಣಿಗೆಯಲ್ಲಿ ಮೈಸೂರು ಬ್ಯಾಂಡ್, ಕೇರಳದ ಪೂಕೋಡ್ ಬ್ಯಾಂಡ್, ಕರಗ ಕುಣಿತ, ಕೀಲು ಕುದುರೆ, ಕೊಡಗಿನ ವಾಲಗ, ಡಿಜೆ ಸೇರಿದಂತೆ ವಿವಿಧ ಮನರಂಜನಾ ತಂಡಗಳು ಪಾಲ್ಗೊಂಡು ವಿಶೇಷ ಮೆರುಗನ್ನು ನೀಡಿದವು.

ವೀರಾಜಪೇಟೆಯಲ್ಲಿ ಬೆಳಗ್ಗಿನಿಂದಲೇ ತುಂತುರು ಮಳೆ ನಂತರ 5 ಗಂಟೆಯ ವೇಳೆಗೆ ಬಿರುಸಿನ ಮಳೆ ಇದ್ದರೂ ಮೆರವಣಿಗೆ ಅಡೆ ತಡೆ ಇಲ್ಲದೆ ನಡೆಯಿತು. ಮಧ್ಯರಾತ್ರಿ ಬಿಡುವು ನೀಡಿ ಸುರಿಯುತ್ತಿದ್ದ ತುಂತುರು ಮಳೆ ನಡುವೆಯೂ ಉತ್ಸವ ಸಮಿತಿ, ಭಕ್ತಾದಿಗಳು, ವಿಸರ್ಜನೋತ್ಸವದಲ್ಲಿ ಪಾಲ್ಗೊಂಡಿ ದ್ದರು.ಮಹಿಳಾ ಪೊಲೀಸರು, ಹೋಂಗಾರ್ಡ್‍ಗಳು, ಕೆ.ಎಸ್. ಆರ್.ಪಿ., ಜಿಲ್ಲಾ ಶಶಸ್ತ್ರ ಪೊಲೀಸ್ ಪಡೆಗಳು, ರ್ಯಾಪಿಡ್ ಆಕ್ಷನ್ ಫೋರ್ಸ್, ಅಗ್ನಿ ಶಾಮಕ ದಳ, ಬಾಂಬ್ ನಿಗ್ರಹ ದಳ, ಶ್ವಾನದಳ ಬಂದೋಬಸ್ತ್‍ನಲ್ಲಿ ಭಾಗವಹಿಸಿತ್ತು.

ವೀರಾಜಪೇಟೆ ಪಟ್ಟಣ ಪಂಚಾಯಿತಿ, ಗೌರಿ ಗಣೇಶ ಉತ್ಸವ ಸಮಿತಿ ವಿಸರ್ಜನೋತ್ಸವದಲ್ಲಿ ವೀಕ್ಷಕರಿಗೆ ಕುಡಿಯುವÀ ನೀರು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಿತ್ತು.