ವೀರಾಜಪೇಟೆ, ಜ. 29: ಮನುಷ್ಯನ ಬದುಕು ಎನ್ನುವದು ಜೀವನದ ಮೌಲ್ಯಗಳನ್ನು ಕಟ್ಟಿಕೊಳ್ಳುವ ದಾಗಿದೆ. ಜೀವನದ ಮೌಲ್ಯಗಳನ್ನು ಅರ್ಥೈಸಿಕೊಳ್ಳುವದರಲ್ಲಿ ಯಶಸ್ಸು ಅಡಗಿದೆ ಎಂದು ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಕೋರನ ಸರಸ್ವತಿ ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.ವೀರಾಜಪೇಟೆ ಸರಕಾರಿ ಪದವಿಪೂರ್ವ ಕಾಲೇಜಿನ 2016-17ನೇ ಸಾಲಿನ “ಪ್ರತಿಭಾ ಪುರಸ್ಕಾರ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು. ಅವರು ಮುಂದುವರಿಯುತ್ತಾ, ವಿದ್ಯಾರ್ಥಿಗಳು ಸಾಧನೆಗಳನ್ನು ಮಾಡಬೇಕ್ಕಿದ್ದಲ್ಲಿ ಅದಕ್ಕಾಗಿ ನಾಳೆಯನ್ನು ಮೀಸಲಿಡಬಾರದು. ಬದಲಾಗಿ ಇಂದೇ ಲಭಿಸುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು. ಯಶಸ್ವಿನ ಹಾದಿ ಸುಗಮ ಮತ್ತು ಸುಲಭವಾಗಿರುವದಿಲ್ಲ. ನಿರಂತರ ಪ್ರಯತ್ನದಿಂದ ಮಾತ್ರ ಯಶಸ್ವು ಸಾಧ್ಯ. ವಿದ್ಯಾರ್ಥಿಗಳು ಸದಾ ಅನ್ವೇಷಣಾ ಪ್ರವೃತ್ತಿಯನ್ನು ಇಟ್ಟುಕೊಂಡಿರಬೇಕು. ಶಿಕ್ಷಣ ಸಂಸ್ಥೆಗಳ ನೆರವಿನಿಂದ ವ್ಯಕ್ತಿತ್ವವನ್ನು ಗುರುತಿಸಿಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೋಂಡ ಶಶಿ ಸುಬ್ರಹ್ಮಣಿ ಮಾತನಾಡಿ, ವಿದ್ಯಾರ್ಥಿಗಳು ಎಂದೂ ಸಮಾಜಕ್ಕೆ ಸಮಸ್ಯೆ ಆಗಬಾರದು. ಬದಲಾಗಿ ವಿದ್ಯಾರ್ಥಿಗಳು ಸಮಾಜದ ಸಮಸ್ಯೆಗಳನ್ನು ಪರಿಹರಿಸುವವ ರಾಗಬೇಕು. ಜೀವನದ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಬೇಕು. ಬದುಕಿನ ಕುರಿತಾದ ಅಭದ್ರತೆಯನ್ನು ಹಿಂದಕ್ಕೆ ಹಾಕಿ ಮುನ್ನುಗ್ಗಬೇಕು. ವಿದ್ಯಾರ್ಥಿಗಳು ಕ್ಷಣಿಕವಾದ ಸುಖಕ್ಕೆ ಮಾರುಹೋಗದೆ ಜೀವನದ ನೈಜ ಉದ್ದೇಶ ಮತ್ತು ಗುರಿಯನ್ನು ಮುಂದೆ ಕಾಣಬೇಕು. ಬೆವರು ಸುರಿಸದ ಹೊರತು ಎಂತಹ ಫಲವತ್ತಾದ ಭೂಮಿಯಲ್ಲಿಯೂ ಬೆಳೆ ಕೊಯ್ಯಲು ಸಾಧ್ಯವಿಲ್ಲ. ವಿದ್ಯೆ ಎಂಬದು ಹಣ ಬಲದಿಂದ ಗಳಿಸುವಂತದ್ದಲ್ಲ. ಧರ್ಮದ ಜಾತಿಯ ಹಿನ್ನೆಲೆಯಲ್ಲಿ ಯಾರನ್ನೂ ಅಳೆಯಬಾರದು ಎಂದು ಹೇಳಿದರು.
2016-17ನೇ ಸಾಲಿನಲ್ಲಿ ಶೈಕ್ಷಣಿಕವಾಗಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು. ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಸದಸ್ಯರುಗಳಾದ ಕುಂಬೇರ ಮನು ಕುಮಾರ್, ಆಶಾ ಸುಬ್ಬಯ್ಯ ವೇದಿಕೆಯಲ್ಲಿದ್ದರು. ಪ್ರಾಂಶುಪಾಲ ಆರ್. ಮೋಹನ್ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕಿ ಪಿ.ಎಂ. ಸುಜಾತ ವರದಿ ವಾಚಿಸಿದರೆ, ಎನ್.ಕೆ. ಜ್ಯೋತಿ ಸ್ವಾಗತಿಸಿದರು. ಅಂತೋಣಿ ಅಳ್ವಾರಿಸ್ ನಿರೂಪಿಸಿ, ಚಾಲ್ರ್ಸ್ ಡಿಸೋಜ ವಂದಿಸಿದರು.