ವೀರಾಜಪೇಟೆ, ಜು. 8: ಆಧುನಿಕ ಕಾಲಘಟ್ಟದಲ್ಲಿ ಮಕ್ಕಳು ಕೂಡ ಮಾನಸಿಕ ಒತ್ತಡಗಳಿಗೆ ಒಳಗಾಗುತ್ತಿದ್ದು, ಶಿಕ್ಷಕರು ಮಕ್ಕಳ ಮಾನಸಿಕ ಸ್ಥಿತಿಯನ್ನು ಅವಲೋಕನ ಮಾಡಿ ಮಾರ್ಗದರ್ಶನ ನೀಡಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಅಭಿಪ್ರಾಯಪಟ್ಟರು. ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪುನಶ್ಚೇತನ ಶಿಬಿರದ ಉದ್ಘಾಟನಾ ಸಮಾರಂಭ ದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ರೆ.ಫಾ. ಡಾ. ಆರೋಗ್ಯ ಸ್ವಾಮಿ, ಜೀವನದಲ್ಲಿ ಯಶಸ್ಸನ್ನು ಪ್ರಭಾವಶಾಲಿ ಹಾಗೂ ಪರಿಣಾಮಕಾರಿಯನ್ನಾಗಿಸಿ ಕೊಳ್ಳಬೇಕಾದರೆ, ಕಾಲಕಾಲಕ್ಕೆ ನಮ್ಮ ಜ್ಞಾನದ ಮಟ್ಟವನ್ನು ಮೇಲ್ದರ್ಜೆಗೇರಿಸಿ ಕೊಳ್ಳಬೇಕು ಎಂದರು. ಸಂತ ಅನ್ನಮ್ಮ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಮದಲೈ ಮುತ್ತು ಮಾತನಾಡಿ, ಶಿಕ್ಷಕರು ಕೇವಲ ಪಾಠ ಮಾಡುವವರಲ್ಲ, ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವವರು. ವಿಜ್ಞಾನ ಎಷ್ಟೇ ಮುಂದುವರಿದರೂ ಶಿಕ್ಷಕರ ಸ್ಥಾನವನ್ನು ಯಂತ್ರಗಳು ತುಂಬಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಪದವಿ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಟೆನ್ನಿ ಕುರಿಯನ್, ಬ್ರಹ್ಮಾವರದ ಕ್ರಾಸ್ ಲ್ಯಾಂಡ್ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ರಾಬರ್ಟ್ ಕೈವ್, ಮೈಸೂರಿನ ಎಕ್ಸೆಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಮ್ಯಾಥ್ಯು, ಸಂತ ಅನ್ನಮ್ಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮಾರ್ಗರೇಟ್ ಲಸ್ರಾಡೋ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿಯರಾದ ಸಿಸ್ಟರ್ ಸಿಸಿಲಿ ಹಾಗೂ ಸಿಸ್ಟರ್ ಜಾನೆಟ್ ಉಪಸ್ಥಿತರಿದ್ದರು.