ವೀರಾಜಪೇಟೆ, ನ. 28: ದೇಶದ ಸಮಗ್ರತೆ, ಜಾತ್ಯಾತೀತ, ಸಮಾನತೆ, ಶಿಕ್ಷಣ, ಮೂಲಭೂತ ಹಕ್ಕುಗಳು, ದೇಶದ ಪ್ರತಿಯೊಬ್ಬ ಪ್ರಜೆಗೂ ಭಾರತದ ಸಂವಿಧಾನ ಮೂಲ ಆಶಯವಾಗಿದೆ. ಸಂವಿಧಾನದಡಿ ಯಲ್ಲಿ ಎಲ್ಲರಿಗೂ ಕಾನೂನಿನ ರಕ್ಷಣೆ ದೊರೆಯುತ್ತದೆ. ರಚನೆಗೊಂಡಿರುವ ಅಮೂಲ್ಯ ಸಂವಿಧಾನವನ್ನು ಗೌರವದಿಂದ ಕಾಪಾಡುವದು ಎಲ್ಲರ ಕರ್ತವ್ಯ ಎಂದು ಇಲ್ಲಿನ ಸಮುಚ್ಛಯ ನ್ಯಾಯಾಲಯಗಳ ಎರಡನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಟಿ.ಎಂ. ನಾಗರಾಜ್ ಹೇಳಿದರು.ವೀರಾಜಪೇಟೆ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದ ಸಂಯುಕ್ತÀ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿದ ನಾಗರಾಜ್ ಅವರು, ಸಮಾಜದಲ್ಲಿ ಮಾನವ ಕುಲ ಶಾಂತಿ-ನೆಮ್ಮದಿ ಯಿಂದ ಶಾಶ್ವತವಾಗಿ ಉಳಿಯಲು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಉತ್ತಮವಾಗಿ ಬಲಪಡಿಸಲು ಜಾಗೃತರಾಗಬೇಕು. ವಿಶ್ವದಲ್ಲಿಯೇ ಬೃಹತ್ ಸಂವಿಧಾನವನ್ನು ಹೊಂದಿ ರುವ ಭಾರತವು ಸಂವಿಧಾನದಲ್ಲಿ ರಾಜ್ಯ ನಿರ್ದೇಶಕ ತತ್ವಗಳನ್ನು ಅಳವಡಿಸಿಕೊಳ್ಳಲಾಗಿದೆ. ರಾಷ್ಟ್ರ ನಿರ್ಮಾಣದಲ್ಲಿಯೂ ಸಂವಿಧಾನ ಮಹತ್ತರ ಪಾತ್ರ ವಹಿಸಿದೆ. ಸಂವಿಧಾನದ ಆಶಯ ಸಮಾಜದ ಕಟ್ಟ ಕಡೆಯ ಜನರಿಗೂ ತಲಪು ವಂತಾಗಬೇಕು. ಕಡು ಬಡವರು, ಬಡವರು ಸರಕಾರದ ಉಚಿತ ಕಾನೂನು ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರು, ಸಮುಚ್ಛಯ ನ್ಯಾಯಾಲಯಗಳ ಹಿರಿಯ ಸಿವಿಲ್ ನ್ಯಾಯಾಧೀಶ ಜಯಪ್ರಕಾಶ್ ಮಾತನಾಡಿ, ವಿದೇಶದಲ್ಲಿಯೂ ಅಧ್ಯಯನ ಮಾಡಿದ ಕಾನೂನು ತಜ್ಞರ ಸೇವೆಯಡಿಯಲ್ಲಿ 1949 ನವೆಂಬರ್ 26 ರಂದು ಭಾರತದ ಸಂವಿಧಾನ ರಚನೆಗೊಂಡು ಮಾನ್ಯತೆ ಪಡೆದಿದ್ದರಿಂದ ಈ ದಿನವನ್ನು ಸಂವಿಧಾನದ ಕಾನೂನು ದಿನಾಚರಣೆ ಯನ್ನಾಗಿ ಆಚರಿಸುತ್ತಿದ್ದೇವೆ. ಪ್ರಜೆಗಳ ಎಲ್ಲಾ ಹಕ್ಕುಗಳಿಗೂ ಸಂವಿಧಾನ ಮೂಲ ಆಶಯವಾಗಿದೆ. ನ್ಯಾಯಾಧೀಶರ ನ್ಯಾಯ ವಿತರಣೆಯಲ್ಲಿ ವಕೀಲರ ಪಾತ್ರ ಮಹತ್ವದಿಂದ ಕೂಡಿದೆ. ಸಮಾಜದ ಜನ ಸಾಮಾನ್ಯರ ಪ್ರತಿಯೊಬ್ಬರಲ್ಲಿ ಕಾನೂನಿನ ಅರಿವಿದ್ದರೆ ಇಂದು ಶಾಂತಿ-ನೆಮ್ಮದಿಯ ಸಮಾಜವನ್ನು ಕಾಣಲು ಸಾಧ್ಯ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ವಕೀಲ ಎಂ.ಕೆ. ಪೂವಯ್ಯ ಮಾತನಾಡಿ, ವಕೀಲರಿಲ್ಲದೆ ಸಮಾಜ ಪರಿಪೂರ್ಣ ಸಮಾಜ ಎನಿಸುವದಿಲ್ಲ. ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕರ್ತವ್ಯ ವಕೀಲರದ್ದು. ಉತ್ತಮ ಸಮಾಜದ ನಿರ್ಮಾಣಕ್ಕೆ ವಕೀಲರ ಪಾತ್ರ ಹಿರಿಯದು. ಸಂವಿಧಾನದ ಪ್ರಜಾಪ್ರಭುತ್ವದ ಮಹತ್ವ, ಕಾನೂನಿನ ಅರಿವು ಕುರಿತು ಮಾಹಿತಿ ನೀಡಿದರು.

ಸಭೆಯನ್ನುದ್ದೇಶಿಸಿ ಜೆ.ಎಂ. ಎಫ್.ಸಿ. ನ್ಯಾಯಧೀಶ ಬಿ.ಕೆ. ಮನು, ಹಿರಿಯ ವಕೀಲರುಗಳಾದ ಎಸ್.ಆರ್. ಜಗದೀಶ್. ಐ.ಆರ್. ಪ್ರಮೋದ್, ಮಹಮ್ಮದ್ ರಫೀಕ್, ಮಾತಂಡ ರಮೇಶ್, ಮತ್ತಿತರರು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎನ್.ಜಿ. ಕಾಮತ್ ಮಾತನಾಡಿ, ಪ್ರತಿಯೊಬ್ಬರು ಭಾರತದ ಸಂವಿಧಾನ, ಪ್ರಜಾಪ್ರಭುತ್ವದ ಮಹತ್ವವನ್ನು ಅರಿಯಬೇಕು. ಅದನ್ನು ಗೌರವಿಸಬೇಕು. ಭಾರತದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಸಂವಿಧಾನದ ಭದ್ರ ಬುನಾದಿಗಳಾಗಿವೆ. ಇದನ್ನು ಗೌರವಿಸಬೇಕು. ಸಾಮಾನ್ಯ ಪ್ರಜೆಗೂ ಕಾನೂನಿನ ಅರಿವಿದ್ದರೆ ಸುಧಾರಣೆಯ ಸಮಸ್ಯೆ ಮುಕ್ತ ಸಮಾಜವನ್ನು ಕಾಣಬಹುದು ಎಂದು ಹೇಳಿದರು.

ನ್ಯಾಯಾಲಯದ ಸಭಾಂಗಣ ದಲ್ಲಿ ಆಯೋಜಿಸಿದ್ದ ಸಭೆಯ ಪ್ರಾರಂಭದಲ್ಲಿ ಸಂಘದ ಉಪಾಧ್ಯಕ್ಷ ವಿ.ಜಿ. ರಾಕೇಶ್ ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿ ಸಿ.ಕೆ. ಪೂವಣ್ಣ ನಿರೂಪಿಸಿದರು. ವಕೀಲೆ ತಾರಾ ವಂದಿಸಿದರು. ವೇದಿಕೆಯಲ್ಲಿ ವಕೀಲ ಬಿ.ಎನ್. ಸುಬ್ಬಯ್ಯ ಉಪಸ್ಥಿತರಿದ್ದರು.