ವೀರಾಜಪೇಟೆ, ಜ. 30: ವೀರಾಜಪೇಟೆಯ ಸಿದ್ದಾಪುರ ರಸ್ತೆಯಲ್ಲಿರುವ ಎರಡೂವರೆ ಶತಮಾನಗಳ ಇತಿಹಾಸ ಹೊಂದಿರುವ ಮಲೆಮಹಾದೇಶ್ವರ ಬೆಟ್ಟದ ಈಶ್ವರ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಇಲ್ಲಿನ ಸಂತ ಅನ್ನಮ್ಮ ದೇವಾಲಯದ ಆಡಳಿತದ ನಡುವೆ ಇದ್ದ ಜಾಗದ ವಿವಾದ ಸಂಬಂಧ ಇಂದು ತಾಲೂಕು ತಹಶೀಲ್ದಾರ್ ಆದೇಶದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಸರ್ವೆಗೆ ಚಾಲನೆ ನೀಡಲಾಯಿತು.

ಮಲೆಮಹದೇಶ್ವರ ಬೆಟ್ಟದ ಮೇಲಿರುವ ಈಶ್ವರ ದೇವಾಲಯಕ್ಕೆ ಈ ಹಿಂದಿನಿಂದಲೇ ಸುಮಾರು 56ಎಕರೆ ಜಾಗವಿದ್ದು ಜಾಗದ ಸರ್ವೆ ಹದ್ದುಬಸ್ತು, ಬಂದೋಬಸ್ತ್ ಇಲ್ಲದೆ ಅನೇಕರು ಈ ಜಾಗವನ್ನು ಕಬಳಿಸಿದ್ದಾರೆ. ಜಾಗದ ಅತಿಕ್ರಮಣದಿಂದಾಗಿ ಇಂದು ನಡೆದ ಸರ್ವೆಯಲ್ಲಿ ಅಂದಾಜು ಆರು ಎಕರೆ ಜಾಗ ಹೊರತು ಪಡಿಸಿದಂತೆ ಉಳಿದ ಜಾಗವೆಲ್ಲ ಅತಿಕ್ರಮಣಕಾರರ ಪಾಲಾಗಿದೆ ಎಂದು ಈಶ್ವರ ದೇವಾಲಯದ ಆಡಳಿತ ಮಂಡಳಿ ದೂರಿದೆ.

ಸಂತ ಅನ್ನಮ್ಮ ದೇವಾಲಯದ ಧರ್ಮಗುರು ಮದುಲೈಮುತ್ತು ಅವರ ಪ್ರಕಾರ ತಮ್ಮ ದೇವಾಲಯಕ್ಕೆ 1958-59ರಲ್ಲಿ ಒಂದು ಎಕರೆ ಜಾಗವನ್ನು ಸರಕಾರ ಮಂಜೂರು ಮಾಡಿದೆ. ಈ ಜಾಗವನ್ನು ಧಾರ್ಮಿಕ ಕಾರ್ಯಗಳಿಗೆ ಬಳಸಲು ಉದ್ದೇಶಿಸಲಾಗಿದೆ. ಈ ಜಾಗಕ್ಕೆ ಬೇಲಿ ಹಾಕಿದನ್ನು ತೆರವು ಮಾಡಲಾಗಿದೆ. ಈ ಒಂದು ಎಕರೆ ಜಾಗವನ್ನು ಸರ್ವೆ ಇಲಾಖೆಯೇ ಗುರುತಿಸಿ ಕೊಡಬೇಕು ಎಂದು ತಹಸಿಲ್ದಾರ್ ಅವರಿಗೆ ಮನವಿ ಸಲ್ಲಿಸಿದ ಮೇರೆ ಇಂದು ಸರ್ವೆಗೆ ಚಾಲನೆ ನೀಡಲಾಯಿತು.

ಇತ್ತೀಚೆಗೆ ಈಶ್ವರ ದೇವಾಲಯ ಹಾಗೂ ಸಂತ ಅನ್ನಮ್ಮ ದೇವಾಲಯಗಳ ನಡುವಿನ ವಿವಾದ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ ರಿಂದ ಕೊಡಗು ಜಿಲ್ಲಾಧಿಕಾರಿ ಯವರೆಗೂ ದೂರು ನೀಡಿದ್ದರಿಂದ ಜಿಲ್ಲಾಧಿಕಾರಿ ಆದೇಶದಂತೆ ಈಗ ಸರ್ವೆ ನಡೆಸಲಾಯಿತು.

ತಾಲೂಕು ಕಚೇರಿಯ ಸರ್ವೆ ಸಿಬ್ಬಂದಿಗಳ ತಂಡ ಇಂದು ಬೆಳಗಿನಿಂದಲೇ ಸರ್ವೆ ಆರಂಭಿಸಿದ್ದು ಎರಡು ಕಡೆಯ ಪ್ರಮುಖರು ಸ್ಥಳದಲ್ಲಿ ಹಾಜರಿದ್ದರು.