ಗೋಣಿಕೊಪ್ಪಲು, ಮೇ 24: ಕೊಡಗು ಜಿಲ್ಲೆಯಲ್ಲಿ ಕಾರ್ಯನಿರತ ಪತ್ರಕರ್ತರಿಗೆ ಇನ್ನೂ ನಿವೇಶನ ಸೌಲಭ್ಯ ದೊರೆತಿರುವದಿಲ್ಲ. ಈ ನಿಟ್ಟಿನಲ್ಲಿ ಆಯಾಯ ತಾಲೂಕಿನಲ್ಲಿ ಕನಿಷ್ಟ 5 ಏಕರೆ ನಿವೇಶನವನ್ನು ಪತ್ರಕರ್ತರಿಗಾಗಿ ಕಂದಾಯ ಇಲಾಖೆಯಿಂದ ಮಂಜೂರು ಮಾಡುವ ನಿಟ್ಟಿನಲ್ಲಿ ಎಲ್ಲಾ ಪತ್ರ ಕರ್ತರೂ ಹೊಂದಾಣಿಕೆಯೊಂದಿಗೆ ಶ್ರಮಿಸಬೇಕು. ಮತ್ತೋರ್ವ ಪತ್ರಕರ್ತರ ಬಗ್ಗೆ ಹೊಟ್ಟೆಕಿಚ್ಚು ಪಡದೆ ವೀರಾಜಪೇಟೆ ತಾಲೂಕಿನ ಅರ್ಹ ಕಾರ್ಯನಿರತ ಪತ್ರಕರ್ತರಿಗೆ ನಿವೇಶನ ಕಾದಿರಿಸುವ ನಿಟ್ಟಿನಲ್ಲಿ ತುರ್ತು ಪ್ರಯತ್ನ ಅಗತ್ಯ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಸಲಹೆ ನೀಡಿದರು. ಗೋಣಿಕೊಪ್ಪಲು ಮಹಿಳಾ ಸಮಾಜ ಸಭಾಂಗಣದಲ್ಲಿ ಶನಿವಾರ ಜರುಗಿದ ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕುಪ್ಪಂಡ ದತ್ತಾತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಸಂಘದ ಉಪಾಧ್ಯಕ್ಷ ಚಟ್ಟಂಗಡ ರವಿ ಸುಬ್ಬಯ್ಯ, ಚಮ್ಮಟ್ಟೀರ ಪ್ರವೀಣ್, ಅಣ್ಣೀರ ಹರೀಶ್ ಮಾದಪ್ಪ ಮತ್ತು ಅಧ್ಯಕ್ಷ ಕುಪ್ಪಂಡ ದತ್ತಾತ್ರಿ ನಡುವೆ ಲೆಕ್ಕಪತ್ರ, ಆಹ್ವಾನ ಪತ್ರಿಕೆ ನೀಡಿಕೆ ಇತ್ಯಾದಿ ವಿಷಯ ಒಳಗೊಂಡಂತೆ ವಾದ-ಪ್ರತಿವಾದ ನಡೆದು ಅಂತಿಮವಾಗಿ ಮನಸ್ತಾಪ ಶಮನವಾಯಿತು.

ಸಭೆಯಲ್ಲಿ ಸಂಘದ ಸದಸ್ಯರಾದ ಪಾಲಿಬೆಟ್ಟ ಪತ್ರಕರ್ತ ಕುಟ್ಟಂಡ ಅಜಿತ್ ಕರುಂಬಯ್ಯ ಅವರು ತಾ.ಪಂ. ಸದಸ್ಯರಾಗಿ ಆಯ್ಕೆಯಾದ ಬಗ್ಗೆ ಅಭಿನಂದಿಸಲಾಯಿತು.

ಇದೇ ಸಂದರ್ಭ ಕ.ಸಾ.ಪ.ನ ಪದಾಧಿಕಾರಿ ಗಳಾದ ಚಟ್ಟಂಗಡ ರವಿ ಸುಬ್ಬಯ್ಯ, ಅಣ್ಣೀರ ಹರೀಶ್ ಮಾದಪ್ಪ ಅವರುಗಳನ್ನೂ ಅಭಿನಂದಿಸ ಲಾಯಿತು.

ಗೋಣಿಕೊಪ್ಪಲು ನೂತನ ಸಂಘದ ಕಟ್ಟಡ ಕಾಮಗಾರಿ ಶೇ. 80 ಭಾಗ ಮುಗಿದಿದ್ದು, ಉಳಿದ ಕಾಮಗಾರಿಯನ್ನು ಜೂ. 15 ಕ್ಕೂ ಮುನ್ನ ಮುಗಿಸುವ ಕುರಿತು ಹೆಚ್.ಕೆ. ಜಗದೀಶ್, ಸಣ್ಣುವಂಡ ಚಂಗಪ್ಪ, ರಮೇಶ್ ಕುಟ್ಟಪ್ಪ ಹಾಗೂ ಕುಪ್ಪಂಡ ದತ್ತಾತ್ರಿ ನಡುವೆ ಚರ್ಚೆ ನಡೆಯಿತು.

ಗೋಣಿಕೊಪ್ಪಲು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಬಾಡಿಗೆ ಕೊಠಡಿಯಲ್ಲಿ ಕಾರ್ಯಾ ಚರಿಸುತ್ತಿದ್ದು, ಜೂ. 30ಕ್ಕೂ ಮುನ್ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸುವ ಕುರಿತು ಚರ್ಚೆ ನಡೆಯಿತು.

ಮಹಾಸಭೆಯ ವೀಕ್ಷಕರಾಗಿ ಭೇಟಿ ನೀಡಿದ್ದ ಸಂಘದ ಉಪಾಧ್ಯಕ್ಷ ರವಿಕುಮಾರ್ ಅವರು, ಜಿಲ್ಲೆಯ ಪತ್ರಿಕಾ ರಂಗಕ್ಕೆ ರಾಜ್ಯಮಟ್ಟದಲ್ಲಿ ಉತ್ತಮ ಹೆಸರಿದೆ. ಅಸಮಾಧಾ ನವನ್ನು ಆದಷ್ಟು ಬದಿಗೊತ್ತಿ ಹೊಂದಾಣಿಕೆಯೊಂದಿಗೆ ಎಲ್ಲರೂ ಒಗ್ಗೂಡಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ. ಪರಸ್ಪರ ವಾದ-ವಿವಾದ, ಮುಕ್ತ ಚರ್ಚೆ ಇರಲಿ. ಹಗೆತನ ಬೇಡ ಎಂದು ಹೇಳಿದರು.

ತಾಲೂಕು ಸಂಘದ ಕಾರ್ಯದರ್ಶಿ ಕಿರಿಯಮಾಡ ರಾಜ್ ಕುಶಾಲಪ್ಪ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಪ್ರಾರ್ಥನೆ ಅಜ್ಜಮಾಡ ಕುಶಾಲಪ್ಪ, ಸ್ವಾಗತ ಉಪಾಧ್ಯಕ್ಷ ಹರೀಶ್ ಮಾದಪ್ಪ ಹಾಗೂ ಕುಪ್ಪಂಡ ದತ್ತಾತ್ರಿ ಅಧ್ಯಕ್ಷರ ಭಾಷಣ, ವಂದನಾರ್ಪಣೆ ಮಾಡಿದರು.