ಗೋಣಿಕೊಪ್ಪ, ನ. 7: ವಿವಾದಕ್ಕೆ ಕಾರಣವಾಗಿರುವ ರಾಜ್ಯ ಸರ್ಕಾರದ ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ವೀರಾಜಪೇಟೆ ತಾಲೂಕು ಪಂಚಾಯಿತಿಯಲ್ಲಿ ನಿರ್ಣಯ ಅಂಗೀಕರಿಸಲಾಯಿತು. ಅಧ್ಯಕ್ಷೆ ಸ್ಮೀತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ತುರ್ತು ವಿಶೇಷ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಸಭೆ ಪ್ರಾರಂಭವಾಗುತ್ತಿದ್ದಂತೆಯೇ ಪಾಲಿಬೆಟ್ಟ ಕ್ಷೇತ್ರದ ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಟಿಪ್ಪು ಜಯಂತಿಯ ವಿಚಾರದಲ್ಲಿ ಸಭೆಯಲ್ಲಿ ಪ್ರಸ್ಥಾಪಿಸಿದರು. ಕಳೆದ ಬಾರಿ ಟಿಪ್ಪು ಜಯಂತಿ ಸಂದರ್ಭ ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಗಲಭೆಗಳು ನಡೆದಿದ್ದು ಜನ ಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ. ಕೊಡಗಿನ ಐನ್ ಮನೆಗಳು, ದೇವಾಲಯಗಳು ಟಿಪ್ಪುವಿನ ಕ್ರೌರ್ಯಕ್ಕೆ ಸಾಕ್ಷಿಯಾಗಿ ನಿಂತಿವೆ, ಟಿಪ್ಪು ಮತಾಂಧನಾಗಿದ್ದು ವಿಷ ಬೀಜ ಬಿತ್ತಿದ್ದಾನೆ ಎಂದ ಅವರು ಸರ್ಕಾರಕ್ಕೆ ವೀರಾಜಪೇಟೆ ತಾಲೂಕು ಪಂಚಾಯಿತಿಯು ಟಿಪ್ಪು ಜಯಂತಿಯನ್ನು ವಿರೋಧಿಸಿದ ನಿರ್ಣಯವವನ್ನು ಕಳಿಸುವಂತೆ ಆಗ್ರಹಿಸಿದರು. ಇವರ ಮಾತಿಗೆ ತಾಲೂಕು ಪಂಚಾಯಿತಿಯ ಸದಸ್ಯರಾದ ಆಶಾಪೂಣಚ್ಚ, ಪಲ್ವೀನ್ ಪೂಣಚ್ಚ,ಆಶಾ ಜೇಮ್ಸ್ ಸೇರಿದಂತೆ ಸದಸ್ಯರೆಲ್ಲಾರೂ ಒಕ್ಕೂರಲಿನ ಬೆಂಬಲ ನೀಡಿದರು. ಒಕ್ಕೂರಲಿನಿಂದ ಟಿಪ್ಪು ಜಯಂತಿ ಆಚರಣೆಯ ವಿರುದ್ದ ಅಭಿಪ್ರಾಯ ಮಂಡಿಸಿ,ಅಂತಿಮವಾಗಿ ವಿರೋಧಿ ನಿರ್ಣಯ ಕೈಗೊಳ್ಳಲಾಯಿತು. ಸದಸ್ಯರೆಲ್ಲರೂ ಪಕ್ಷಬೇಧ ಮರೆತು ನಿರ್ಣಯ ಕೈಗೊಂಡಿದ್ದು ವಿಶೇಷವಾಗಿತ್ತು. ತಾ.ಪಂ. ನ ಉಪಾಧ್ಯಕ್ಷ ನೆಲ್ಲಿರ ಚಲನ್ ಸೇರಿದಂತೆ ಸಭೆಯಲ್ಲಿ ಇ.ಒ. ಪಡ್ನೇಕರ್, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರು ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.