ಮಡಿಕೇರಿ, ಜು. 28: ಭಾರತ ದೇಶದ ರಕ್ಷಣಾ ಪಡೆಗೆ ಮಹತ್ವದ ಸೇವೆ ನೀಡುವದರೊಂದಿಗೆ ಸೇನಾ ಪರಂಪರೆಗೆ ಪ್ರಸಿದ್ಧಿಯಾಗಿರುವ ವೀರಯೋಧರ ನಾಡು ಕೊಡಗು ಜಿಲ್ಲೆಗೆ ಭಾರತೀಯ ಸೇನೆಯ ಅತ್ಯುನ್ನತ ದರ್ಜೆಯಲ್ಲಿರುವ ಸೇನಾಧಿಕಾರಿಯೊಬ್ಬರು ಭೇಟಿ ನೀಡಲಿದ್ದಾರೆ .ಭಾರತೀಯ ಭೂಸೇನೆಯ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಅವರು ಕೊಡಗಿಗೆ ಭೇಟಿ ನೀಡಲಿದ್ದು, ಇವರೊಟ್ಟಿಗೆ ಸೇನೆಯ ಇನ್ನಿತರ ಹಲವಾರು ಹಿರಿಯ ಅಧಿಕಾರಿಗಳು ಆಗಮಿಸಲಿದ್ದಾರೆ. ಹಿರಿಯ ಅಧಿಕಾರಿಯ ಭೇಟಿ ಬಹುತೇಕ ಖಚಿತಗೊಂಡಿದ್ದು, ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿ ರುವದು ಕಂಡು ಬಂದಿದೆ. ಆಗಸ್ಟ್ 5ರಿಂದ 7ರ ತನಕ ಜನರಲ್ ದಲ್ಬೀರ್ ಸಿಂಗ್ ಅವರು ಸೇನಾ ಜಿಲ್ಲೆ ಕೊಡಗಿನಲ್ಲಿ ವಾಸ್ತವ್ಯ ಹೂಡಲಿರುವದಾಗಿ ತಿಳಿದು ಬಂದಿದೆ.
ಭಾರತೀಯ ಸೇನೆಯ ಎಂ.ಇ.ಜಿ. ವಿಭಾಗದ ವತಿಯಿಂದ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಿವೃತ್ತ ಯೋಧರ ರ್ಯಾಲಿ ಕಾರ್ಯಕ್ರಮ ಆಗಸ್ಟ್ 6ರಂದು ನಿಗದಿಯಾಗಿದೆ. ಈ ರ್ಯಾಲಿಗೆ ಸೇನೆಯ ಅತ್ಯುನ್ನತ ಹುದ್ದೆಯಾದ ಜನರಲ್ ರ್ಯಾಂಕ್‍ನ ಅಧಿಕಾರಿ ಆಗಮಿಸುತ್ತಿ ರುವದು ವಿಶೇಷವಾಗಿದೆ.
ಜನರಲ್ ದಲ್ಬೀರ್ ಸಿಂಗ್ ಅವರು ಭೇಟಿ ನೀಡುವ ಹಿನ್ನೆಲೆಯಲ್ಲಿ ಅವರೊಂದಿಗೆ ಆರ್ಮಿ ಕಮಾಂಡರ್, ದಕ್ಷಿಣ ವಲಯ ಸೇನಾ ಮುಖ್ಯಸ್ಥರು, ಸಬ್ ಏರಿಯಾ ಕಮಾಂಡರ್ ಸೇರಿದಂತೆ ಲೆಫ್ಟಿನೆಂಟ್ ಜನರಲ್ ಹುದ್ದೆಯ ಅಧಿಕಾರಿಗಳು, ಇನ್ನಿತರ ಪ್ರಮುಖ ಸೇನಾಧಿಕಾರಿಗಳು ಆಗಮಿಸ ಲಿದ್ದಾರೆಂದು ತಿಳಿದು ಬಂದಿದೆ.
ದೇಶದ ರಕ್ಷಣಾ ಪಡೆಗೆ ಕೊಡಗು ಜಿಲ್ಲೆ ಇಬ್ಬರು ಜನರಲ್ ಸೇರಿದಂತೆ ಸಾಕಷ್ಟು ಅಧಿಕಾರಿಗಳು ಹಾಗೂ ಸೈನಿಕರನ್ನು ಕೊಡುಗೆಯಾಗಿ ನೀಡಿರುವ ವಿಶೇಷತೆಯನ್ನು ಅವಲೋಕಿಸಿ ಸೇನಾ ಪರಂಪರೆಯ ಮೂಲಕ ಗುರುತಿಸಿ ಕೊಂಡಿರುವ ಕೊಡಗಿಗೆ ಈಗಿನ ಸೇನಾ ಮುಖ್ಯಸ್ಥರು ಭೇಟಿ ನೀಡುವ ಆಸಕ್ತಿ ತೋರಿದ್ದಾರೆನ್ನಲಾಗಿದೆ.