ಮಡಿಕೇರಿ, ಆ. 6: ನಿಜಕ್ಕೂ ಅದೊಂದು ಸ್ಮರಣೀಯ ಕ್ಷಣ. ವೀರರ ತವರು, ಸೈನಿಕರ ನೆಲೆಬೀಡು ಎಂದು ಖ್ಯಾತಿ ಪಡೆದ ಕೊಡಗಿನ ಜನತೆ ಹೆಮ್ಮೆ ಪಡುವಂತಹ ಸಂದರ್ಭ. ಕರ್ನಾಟಕ ಮತ್ತು ಕೇರಳ ಸಬ್ ಏರಿಯಾ ವತಿಯಿಂದ ಆಯೋಜಿಸಲಾಗಿದ್ದ ಸೇವಾ ನಿವೃತ್ತ ಯೋಧರ ಸಮಾವೇಶಕ್ಕೆ ಪಾಲ್ಗೊಳ್ಳಲು ಮಡಿಕೇರಿಗೆ ಆಗಮಿಸಿದ್ದ ಭೂಸೇನೆಯ ವರಿಷ್ಠ ಜ. ದಲ್ಬೀರ್ ಸಿಂಗ್ ಶಿಸ್ತಿನ ನಡಿಗೆಯೊಂದಿಗೆ ಕೊಡಗಿನ ಸುಪುತ್ರ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಪ್ರತಿಮೆ ಎದುರು ನಿಂತು ಗೌರವ ಹಾಗೂ ಗಾಂಭೀರ್ಯತೆಯೊಂದಿಗೆ ಸಲ್ಲಿಸಿದ ನಮನ; ಒಂದು ಕ್ಷಣ ನೆರೆದಿದ್ದವರ ಮೈ ರೋಮಾಂಚನಗೊಳ್ಳುವಂತೆ ಮಾಡಿತು.

ಜ. ದಲ್ಬೀರ್‍ಸಿಂಗ್ ಅವರು ಭೇಟಿ ನೀಡಲಿದ್ದ ಹಿನ್ನೆಲೆ ಇಂದು ಮುಂಜಾನೆಯಿಂದಲೇ ಮಂಜಿನ ನಗರಿ ಮಡಿಕೇರಿ ಸೇನಾಪಡೆಯ ಸರ್ಪಗಾವಲಿನಲ್ಲಿತ್ತು. ಆಗಿಂದಾಗ್ಗೆ ಸುರಿಯುತ್ತಿದ್ದ ಮಳೆಯ ನಡುವೆಯು ಸೈನಿಕರ ‘ಟೈಟ್ ಸಕ್ಯೂರಿಟಿ' ಹಿನ್ನೆಲೆಯಲ್ಲಿ ಚಳಿಯ ನಡುವೆಯೂ ವಾತಾವರಣ ಬಿಸಿಯೇರಿದಂತಿತ್ತು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ಪ ಅವರ ಪ್ರತಿಮೆ ಬಳಿ ಸಕಲ ಸಿದ್ಧತೆಗಳು ನಡೆದಿದ್ದವು. ಪ್ರತಿಮೆಯ ಸುತ್ತಲೂ ಪುಷ್ಪಾಲಂಕಾರ ಮಾಡಲಾಗಿತ್ತು. ಸ್ವತಹ ಸೇನಾಪಡೆಯೇ ಶುಚಿತ್ವ, ಅಲಂಕಾರದ ಜವಾಬ್ದಾರಿ ನಿರ್ವಹಿಸಿತ್ತು. ಸುಮಾರು 9.30 ಗಂಟೆ ವೇಳೆಗೆ ಶ್ವಾನದಳ, ಬಾಂಬ್ ಪತ್ತೆದಳ, ಸೇನೆಯ ವಿಶೇಷ ಭದ್ರತಾ ಪಡೆಗಳು ಕಾರ್ಯಪ್ಪ ಅವರ ಪ್ರತಿಮೆಯ ಸುತ್ತಲೂ ಪರಿಶೀಲನೆ ನಡೆಸಿದವು. ವಿಶ್ವದ ಐಕ್ಯತೆಯನ್ನು ಸಾರುವ ಬಾವುಟಗಳು ‘ಫೀಲ್ಡ್ ಮಾರ್ಷಲ್ ಕಾರ್ಯಪ್ಪ" ಪ್ರತಿಮೆ ಸುತ್ತಲೂ ರಾರಾಜಿಸುತ್ತಿದ್ದವು. ದಕ್ಷಿಣ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್, ದಕ್ಷಿಣ ಭಾರತ್ ಏರಿಯಾದ ಜನರಲ್ ಆಫೀಸರ್ ಕಮಾಂಡಿಂಗ್ ಲೆಫ್ಟಿನೆಂಟ್ ಜನರಲ್ ಜಗ್ಬೀರ್ ಸಿಂಗ್, ಕರ್ನಾಟಕ ಮತ್ತು ಕೇರಳ ಸಬ್ ಏರಿಯಾದ ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ಕೆ.ಎಸ್. ನಿಜ್ಜರ್ ಹಾಗೂ ಇನ್ನಿತರ ಸೇನಾಧಿಕಾರಿಗಳು ಸುಮಾರು 10 ಗಂಟೆ ವೇಳೆ ಪ್ರತಿಮೆ ಬಳಿ ಆಗಮಿಸಿ ಸಿದ್ಧತೆಯ ಬಗ್ಗೆ ಪರಿಶೀಲಿಸಿದರು. 11 ಗಂಟೆ 10 ನಿಮಿಷಕ್ಕೆ ಸರಿಯಾಗಿ ಭಾರೀ ಭದ್ರತೆಯೊಂದಿಗೆ ಬಂದಿಳಿದ ಭೂ ಸೇನೆಯ ಮುಖ್ಯಸ್ಥರಾದ ಜ. ದಲ್ಬೀರ್ ಸಿಂಗ್ ಅವರು ಸೇನಾ ಬ್ಯಾಂಡ್, ಸೇನಾ ಘೋಷದ ನಡುವೆ ಕಾರ್ಯಪ್ಪ ಅವರ ಪ್ರತಿಮೆಗೆ ಪುಷ್ಪಹಾರವಿಟ್ಟು ಗೌರವ ನಮನ ಸಲ್ಲಿಸಿದರು. ಈ ವೇಳೆ ಕಾರ್ಯಪ್ಪ ವೃತ್ತ ವ್ಯಾಪ್ತಿಯ ಪ್ರದೇಶ ಸಂಪೂರ್ಣ ಸೇನಾ ಪಡೆಗಳ ಹಿಡಿತದಲ್ಲಿತ್ತು.

ಗೌರವ ನಮನ ಅರ್ಪಿಸಿದ ಬಳಿಕ ಕೂಡಿಗೆ ಸೈನಿಕ ಶಾಲೆಯ ಮಕ್ಕಳೊಂದಿಗೆ ಮಾತುಕತೆ ನಡೆಸಿದ ದಲ್ಬೀರ್ ಸಿಂಗ್ ಪ್ರೋತ್ಸಾಹಕ ನುಡಿಯೊಂದಿಗೆ ಮಕ್ಕಳನ್ನು ಹುರಿದುಂಬಿಸಿದರು. ಸೈನಿಕ ಶಾಲೆಯ ಮಕ್ಕಳೂ ಕೂಡ ಕಟ್ಟುನಿಟ್ಟಿನ ನಡೆ ನುಡಿಯೊಂದಿಗೆ ಗಮನ ಸೆಳೆದರು. ನಂತರ ಸೇನಾ ಇಲಾಖೆಯಿಂದ 1 ಲಕ್ಷ ರೂ.ಗಳ ಚೆಕ್ ಅನ್ನು ದಲ್ಬೀರ್ ಸಿಂಗ್ ಅವರು ಸೈನಿಕ ಶಾಲೆಗೆ ಹಸ್ತಾಂತರಿಸಿದರು.

ಶೇ. 25 ಮೀಸಲಾತಿಗೆ ಮನವಿ

ಫೀಲ್ಡ್ ಮಾರ್ಷಲ್ ಕಾರ್ಯಪ್ಪ - ಜನರಲ್ ತಿಮ್ಮಯ್ಯ ಫೋರಂನ ಪದಾಧಿಕಾರಿಗಳೊಂದಿಗೂ ಜ. ದಲ್ಬೀರ್ ಸಿಂಗ್ ಮಾತುಕತೆ ನಡೆಸಿದರು. ಈ ಸಂದರ್ಭ ಕೂಡಿಗೆ ಸೈನಿಕ ಶಾಲೆಯಲ್ಲಿ ಕೊಡಗಿನ ಮಕ್ಕಳಿಗೆ ಶೇ. 25ರಷ್ಟು ಮೀಸಲಾತಿ ಕಲ್ಪಿಸುವಂತೆ ಫೋರಂ ಪ್ರಮುಖರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಭೂ ಸೇನಾಧಿಪತಿ, ರಾಜ್ಯವಾರು ಮೀಸಲಾತಿಗೆ ಅವಕಾಶವಿದೆಯಾದರೂ ಜಿಲ್ಲಾವಾರು ಮೀಸಲಾತಿಗೆ ಅವಕಾಶವಿಲ್ಲ. ಏಕೆಂದರೆ ಅನುದಾನವನ್ನು ಶೇ. 90ರಷ್ಟು ರಾಜ್ಯ, ಶೇ. 10ರಷ್ಟು ಕೇಂದ್ರ ಸರ್ಕಾರದ ಭರಿಸುತ್ತದೆ. ಆದರೂ ತಮ್ಮ ಕೋರಿಕೆಯ ಬಗ್ಗೆ ಕೇಂದ್ರ ಸರ್ಕಾರ ಗಮನ ಸೆಳೆಯುತ್ತೇನೆ ಎಂದು ಭರವಸೆಯಿತ್ತರು.

ಈ ಸಂದರ್ಭ ಫೋರಂ ಪ್ರಮುಖರಾದ ಮೇಜರ್ ನಂಜಪ್ಪ, ಮಾಚಿಮಾಡ ರವೀಂದ್ರ, ಉಳ್ಳಿಯಡ ಎಂ. ಪೂವಯ್ಯ, ಯುಕೋ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮತ್ತಿತರರು ಇದ್ದರು.

ಫೀ.ಮಾ. ಕಾರ್ಯಪ್ಪ ಅವರ ಬಾಲ್ಯ, ವೃತ್ತಿ ಬದುಕಿನ ಚಿತ್ರಗಳನ್ನು ಇದೇ ಸಂದರ್ಭ ಪ್ರದರ್ಶನಕ್ಕಿಡ ಲಾಗಿತ್ತು. ಅದನ್ನು ಕೂಡ ದಲ್ಬೀರ್ ಸಿಂಗ್ ವೀಕ್ಷಿಸಿದರು. ದಲ್ಬೀರ್ ಸಿಂಗ್ ಅವರು ಭೇಟಿ ನೀಡಿ ತೆರಳುವವರೆಗೂ ಸಾರ್ವಜನಿಕರು ಗುಂಪು ಗುಂಪಾಗಿ ಅವರನ್ನು ವೀಕ್ಷಿಸಲು ವೃತ್ತದ ಬಳಿ ಜಮಾಯಿಸಿದ್ದರಾದರೂ ಭದ್ರತೆ ಹೆಚ್ಚಿದ್ದ ಕಾರಣ ಬಹುತೇಕರಿಗೆ ವೀಕ್ಷಿಸಲು ಸಾಧ್ಯವಾಗಲಿಲ್ಲ.

ಸನ್ನಿಸೈಡ್‍ಗೆ ಭೇಟಿ

ಜನರಲ್ ತಿಮ್ಮಯ್ಯ ಅವರ ನಿವಾಸ ‘ಸನ್ನಿಸೈಡ್'ಗೆ ಭೇಟಿ ನೀಡಿದ ದಲ್ಬೀರ್ ಸಿಂಗ್ ಅವರು ಅಲ್ಲಿ ಗಿಡ ನೆಟ್ಟರು. ಬಳಿಕ ಸನ್ನಿಸೈಡ್‍ನ ಒಳಗೆ ತೆರಳಿ ತಿಮ್ಮಯ್ಯ ಅವರ ಬದುಕಿನ ಚಿತ್ರಗಳನ್ನು ವೀಕ್ಷಣೆ ಮಾಡಿದರು.

‘ಟ್ರಾಫಿಕ್ ಜಾಂ'

ಮಾಜಿ ಸೈನಿಕರ ರ್ಯಾಲಿ ಏರ್ಪಟ್ಟಿದ್ದ ಹಿನ್ನೆಲೆ ಇಂದು ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಕಂಡು ಬಂತು. ಅದರಲ್ಲೂ ಭೂ ಸೇನಾ ಮುಖ್ಯಸ್ಥರು ಬಂದ ಬಳಿಕವಂತೂ ಸಂಚಾರ ವ್ಯವಸ್ಥೆ ಮತ್ತಷ್ಟು ಏರು ಪೇರಾಗುವದರೊಂದಿಗೆ ಸಂಚಾರ ವ್ಯವಸ್ಥೆಯನ್ನು ಸರಿಪಡಿಸಲು ಪೊಲೀಸರು ಹರಸಾಹಸ ಪಡುವಂತಾಗಿತ್ತು. ದಲ್ಬೀರ್ ಸಿಂಗ್ ಅವರ ಕಾರಿನೊಂದಿಗೆ ಸುಮಾರು ಐದು ವಾಹನಗಳು ‘ಎಸ್ಕಾರ್ಟ್' ಮಾಡಿದವು. ಇನ್ನು ಕ್ರಿಸ್ಟಲ್ ಕೋರ್ಟ್ ಸಮೀಪವಂತೂ ವಾಹನಗಳು ತುಂಬಿ ಹೋಗಿದ್ದವು. ದಲ್ಬೀರ್ ಸಿಂಗ್ ಅವರ ವಾಹನ ಸಂಚರಿಸುವ ಸ್ಥಳಗಳಲ್ಲಿ ಸೈನಿಕರು ಕೂಡ ಪೊಲೀಸರೊಂದಿಗೆ ಸೇರಿಕೊಂಡು ಸಂಚಾರ ಸುಗಮಗೊಳಿಸಲು ಸಹಕರಿಸಿದರು. ಕಾರ್ಯಪ್ಪ ವೃತ್ತದ ಬಳಿಯಿಂದ ತಿಮ್ಮಯ್ಯ ವೃತ್ತದವರೆಗೆ ಕೆಲಕಾಲ ವಾಹನ ದಟ್ಟಣೆ ಹೆಚ್ಚಾಗಿ ನಾಗರಿಕರು, ವಾಹನ ಸವಾರರು ಪರಿತಪಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ನಗರದ ಅಲ್ಲಲ್ಲಿ ಬಂದೂಕಿನೊಂದಿಗೆ ಭದ್ರತೆಗಾಗಿ ಕಾರ್ಯಾಚರಿಸುತ್ತಿದ್ದ ಸೈನಿಕರನ್ನು ಸಾರ್ವಜನಿಕರು ಅಚ್ಚರಿಯಿಂದ ನೋಡುತ್ತಿದ್ದ ದೃಶ್ಯವೂ ಕಂಡುಬಂತು. ಫೀ.ಮಾ. ಕಾರ್ಯಪ್ಪಗೆ ನಮಿಸಿ, ಸನ್ನಿ ಸೈಡ್‍ಗೆ ಭೇಟಿಕೊಟ್ಟು, ಬಳಿಕ ಕ್ರಿಸ್ಟಲ್‍ಹಾಲ್‍ನಲ್ಲಿ ಏರ್ಪಡಿಸಿದ್ದ ಸೇವಾ ನಿವೃತ್ತ ಯೋಧರ ಸಮಾವೇಶದಲ್ಲಿ ಪಾಲ್ಗೊಂಡ ದಲ್ಬೀರ್ ಸಿಂಗ್ ಸುಮಾರು 3 ಗಂಟೆ ವೇಳೆಗೆ ನಿರ್ಗಮಿಸಿದರು.