ಕುಶಾಲನಗರ, ಸೆ. 23: ಕುಶಾಲನಗರ ಹೋಬಳಿ ವಿಶ್ವಕರ್ಮ ಸಮಾಜದ ಆಶ್ರಯದಲ್ಲಿ 12ನೇ ವರ್ಷದ ವಿಶ್ವಕರ್ಮ ಪೂಜಾ ಮಹೋತ್ಸವ ಮತ್ತು ವಾರ್ಷಿಕ ಮಹಾಸಭೆ ರಥಬೀದಿಯ ಚೌಡೇಶ್ವರಿ ದೇವಾಲಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಸಮಾಜದ ಮಹಿಳೆಯರು ಅಯ್ಯಪ್ಪಸ್ವಾಮಿ ದೇವಾಲಯ ಬಳಿಯ ಕಾವೇರಿ ನದಿಯಿಂದ ಮಂಗಳವಾದ್ಯದೊಂದಿಗೆ ಪೂರ್ಣಕುಂಭ ಕಲಶ ಹೊತ್ತು ವಿಶ್ವಕರ್ಮ ಮೂರ್ತಿಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ದೇವಾಲಯಕ್ಕೆ ಸಾಗಿದರು. ನಂತರ ದೇವಾಲಯದ ಆವರಣದಲ್ಲಿ ವೇ.ಬ್ರ. ಶ್ರೀ ಬೆಕ್ರೆ ರಾಮಸ್ವಾಮಿ ನೇತೃತ್ವದಲ್ಲಿ ಗಣಪತಿ ಹೋಮ, ವಿಶ್ವಕರ್ಮ ಪೂಜೆ, ಪೂರ್ಣಾಹುತಿ ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.

ಸಮಾಜದ ಅಧ್ಯಕ್ಷ ಹೆಚ್.ವಿ. ರಾಜಾಚಾರ್ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ಸಭೆಯಲ್ಲಿ ಸಮಾಜದ ಗೌರವಾಧ್ಯಕ್ಷ ಜಿ.ಎ. ನಿಂಗಾಚಾರ್, ಉಪಾಧ್ಯಕ್ಷ ನಾಗಣ್ಣಾಚಾರ್, ಕಾರ್ಯದರ್ಶಿ ಹೆಚ್.ಬಿ. ರಾಜಮೂರ್ತಿ, ಸಹ ಕಾರ್ಯದರ್ಶಿ ಹೆಚ್.ಎನ್. ದಕ್ಷಿಣಮೂರ್ತಿ ಮತ್ತು ನಿರ್ದೇಶಕರು, ಸದಸ್ಯರು ಇದ್ದರು.