ಮಡಿಕೇರಿ, ಆ. 11: ನೈಸರ್ಗಿಕವಾಗಿ ಉತ್ತಮ ಬಾಂಧವ್ಯ ದೊಂದಿಗೆ ಆರೋಗ್ಯಯುತ ಹಾಲು ಮಗುವಿಗೆ ನೀಡಬೇಕಾದರೆ ಅದು ಅಮ್ಮನಿಂದ ಮಾತ್ರ ಸಾಧ್ಯ. ತಾಯಿಯ ಹಾಲಿಗಿಂತ ಸಮನಾದ ಆಹಾರ ಬೇರೊಂದಿಲ.್ಲ ಆದ್ದರಿಂದ ಮಗುವಿಗೆ ಹಾಲು ಉಣಿಸುವಲ್ಲಿ ತಾಯಿಯ ಜವಾಬ್ದಾರಿ ಹೆಚ್ಚಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು ತಿಳಿಸಿದ್ದಾರೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ತಾಲೂಕು ಸ್ತ್ರೀಶಕ್ತಿ ಒಕ್ಕೂಟ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸ್ತ್ರೀಶಕ್ತಿ ಭವನದಲ್ಲಿ ಇತ್ತೀಚೆಗೆ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಮತ್ತು ಕಾನೂನು ಶಿಬಿರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮಗುವಿನ ಮುಂದಿನ ಆರೋಗ್ಯದ ದೃಷ್ಟಿಯಿಂದ ತಾಯಿ ಹಾಲನ್ನೇ ನೀಡಬೇಕು. ಎಲ್ಲಾ ಗರ್ಭಿಣಿ ಸ್ತ್ರೀಯರಿಗೆ ಸ್ತನ್ಯಪಾನದ ಮಹತ್ವ ಮತ್ತು ಉಪಯೋಗಗಳನ್ನು ತಿಳಿಸುವಲ್ಲಿ ಕಾರ್ಯಕ್ರಮಗಳು ಹೆಚ್ಚಿನದಾಗಿ ನಡೆಯಬೇಕು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಟಿ. ಜೋಸೆಫ್ ಮಾತನಾಡಿ, ಬಹಳಷ್ಟು ವರ್ಷಗಳ ಹಿಂದಿನ ತಾಯಂದಿರಿಗೂ, ಇಂದಿನ ತಾಯಂದಿರಿಗೂ ಬಹಳ ವ್ಯತ್ಯಾಸ ಇದೆ. ಈ ಹಿಂದೆ ಗೃಹಿಣಿಯು ಮನೆಯಲ್ಲೇ ಇದ್ದು ಎದೆ ಹಾಲು ನೀಡುವದರ ಮೂಲಕ ಮಗುವಿನ ಆರೋಗ್ಯ ಮಾತ್ರವಲ್ಲದೆ ಉತ್ತಮ ಬಾಂಧವ್ಯ ಇರುತ್ತಿತು. ಆದರೆ ಇಂದಿನ ದಿನಗಳಲ್ಲಿ ಪತಿ ಪತ್ನಿಯರಿಬ್ಬರೂ ಹೊರಗೆ ದುಡಿಯುತ್ತಿರುವದರಿಂದ ಮಗುವಿನ ಪೋಷಣೆಗೆ ಕೊಡುವ ಸಮಯದ ಅಭಾವ ಕಂಡುಬರುತ್ತಿದೆ. ಜೊತೆಗೆ ಮಗುವಿಗೆ ಸ್ತನ್ಯಪಾನ ಸರಿಯಾದ ಪ್ರಮಾಣದಲ್ಲಿ ದೊರಕುತ್ತಿಲ್ಲ ಎಂದರು.
ಇದೇ ಸಂದರ್ಭ ಡಾ. ಸುನೀಲ್ ಕುಮಾರ್ ಹಾಗೂ ಡಾ. ಪೂಜಾ ಸ್ತನ್ಯಪಾನದ ಮಹತ್ವದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ವಕೀಲರಾದ ಕೆ.ಎಂ. ಮೀನಕುಮಾರಿ, ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಉಪನ್ಯಾಸ ನೀಡಿದರು. ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಎ.ಬಿ. ಕವಿತಾ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಪಿ. ಸವಿತಾ, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಇದ್ದರು.
ಶಕುಂತಲಾ ಪ್ರಾರ್ಥಿಸಿದರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಬಿ.ಎಸ್. ಜಯಪ್ಪ ಸ್ವಾಗತಿಸಿ, ನಿರೂಪಿಸಿದರು, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಂದಿಸಿದರು.