ಕುಶಾಲನಗರ, ಮೇ 25 : ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿಯು ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಜಿಲ್ಲಾ ಹೊಟೇಲ್, ರೆಸಾರ್ಟ್ ಮತ್ತು ರೆಸ್ಟೋರೆಂಟ್ ಸಂಘದ ಸಹಯೋಗ ದೊಂದಿಗೆ ತಾ. 27 ರಂದು ಕುಶಾಲನಗರ ಬಳಿಯ ಕಾವೇರಿ ನಿಸರ್ಗಧಾಮದಲ್ಲಿ ಮೈಸೂರು ವಿಭಾಗಮಟ್ಟದ ‘ವಿಶ್ವ ಜೀವ ವೈವಿಧ್ಯ’ ದಿನಾಚರಣೆ ಮತ್ತು ‘ಪರಿಸರ ಸಂರಕ್ಷಣೆ’ ಕುರಿತ ಕಾರ್ಯಾಗಾರ ಏರ್ಪಡಿಸಲಾಗಿದೆ.

ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ ವತಿಯಿಂದ ಈ ಶಿಬಿರದಲ್ಲಿ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರಲ್ಲಿ ಪಶ್ಚಿಮಘಟ್ಟ ಪ್ರದೇಶದ ಜೀವಿ ವೈವಿಧ್ಯ, ಅರಣ್ಯ, ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆ ಹಾಗೂ ನೆಲ-ಜಲ ಸಂರಕ್ಷಣೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆ ಮತ್ತು ಪರಿಸರ ಸಂರಕ್ಷಣೆಯ ಜಾಗೃತಿ ಮನೋಭಾವವನ್ನು ಬೆಳೆಸುವ ದಿಸೆಯಲ್ಲಿ ಪರಿಸರ ಶಿಬಿರವನ್ನು ಸಂಘಟಿಸಲಾಗಿದೆ ಎಂದು ರಾಷ್ಟ್ರೀಯ ಪರಿಸರ ಜಾಗೃತಿ ಆಂದೋಲನದ ರಾಜ್ಯ ಸಂಚಾಲಕರು ಹಾಗೂ ಶಿಬಿರದ ನಿರ್ದೇಶಕರಾದ ಟಿ.ಜಿ.ಪ್ರೇಮಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ 27 ರಂದು ಬೆಳಿಗ್ಗೆ 10.15 ಕ್ಕೆ ಆರಂಭವಾಗುವ ಶಿಬಿರವನ್ನು ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಅವರು ಉದ್ಘಾಟಿಸಲಿದ್ದು, ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಡಾ|| ಜೆ.ಸೋಮಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡು ಕೊಂಡಲು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮೈಸೂರು ವಲಯ ಕಚೇರಿಯ ಹಿರಿಯ ಪರಿಸರ ಅಧಿಕಾರಿ ಕೆ.ಎಂ.ಲಿಂಗರಾಜು, ಜಿಲ್ಲಾ ಹೊಟೇಲ್, ರೆಸಾರ್ಟ್ ಮತ್ತು ರೆಸ್ಟೋರೆಂಟ್ ಸಂಘದ ಅಧ್ಯಕ್ಷ ಬಿ.ಆರ್.ನಾಗೇಂದ್ರಪ್ರಸಾದ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್, ಜಿಲ್ಲಾ ಸಮಿತಿಯ ಅಧ್ಯಕ್ಷ ಸುಭಾಶ್ ರೈ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಅಂದು ಅಪರಾಹ್ನ 3.45 ಕ್ಕೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಬಿ.ಎ.ಹರೀಶ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಎಂ.ಎಂ.ಚರಣ್ ಪ್ರಶಂಸನಾ ಪತ್ರ ವಿತರಿಸಲಿದ್ದಾರೆ. ಪರಿಸರ ಅಧಿಕಾರಿ ಜಿ.ಆರ್.ಗಣೇಶನ್, ಎಸಿಎಫ್ ಭಾಸ್ಕರ್‍ರಾವ್, ಆರ್‍ಎಫ್‍ಓ ಎಂ.ಎಸ್.ಚಿಣ್ಣಪ್ಪ, ಕುಶಾಲನಗರ ರೋಟರಿ ಕ್ಲಬ್ ಅಧ್ಯಕ್ಷೆ ಶೋಭಾ ಸತೀಶ್, ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿಯ ಮಾಜಿ ಗೌರವ ಅಧ್ಯಕ್ಷ ಕೆ.ಕೆ. ಮಂಜುನಾಥ್‍ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.

ಶಿಬಿರದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಿ ಡಾ|| ಹರೀಶ್ ಆರ್.ಭಟ್ ಅವರು ‘ಜೀವ ವೈವಿಧ್ಯತೆಯ ಪ್ರಾಮುಖ್ಯತೆ ಹಾಗೂ ಪರಿಸರ ಸಂರಕ್ಷಣೆಯ ಮುಂದೆ ಇರುವ ಸವಾಲುಗಳು’ ಕುರಿತು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮೈಸೂರು ವಲಯ ಕಚೇರಿಯ ಹಿರಿಯ ಪರಿಸರ ಅಧಿಕಾರಿ ಕೆ.ಎಂ.ಲಿಂಗರಾಜು ಅವರು, ‘ಪರಿಸರ ಸಂರಕ್ಷಣೆಯಲ್ಲಿ ಮಾಲಿನ್ಯ ನಿಯಂತ್ರಣ’ ಕುರಿತು, ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕøತರಾದ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಟಿ.ಜಿ.ಪ್ರೇಮ ಕುಮಾರ್ ಅವರು, ‘ಶಾಲಾ ಇಕೋ ಕ್ಲಬ್‍ಗಳ ಮೂಲಕ ಪರಿಸರ ಸಂರಕ್ಷಣೆ’ ಕುರಿತು ಹಾಗೂ ರಾಜ್ಯ ವಿಜ್ಞಾನ ಪರಿಷತ್ತು ಮೈಸೂರು ಜಿಲ್ಲಾ ಸಮಿತಿಯ ಕಾರ್ಯದರ್ಶಿ ಜಿ.ಬಿ.ಸಂತೋಷ್ ಕುಮಾರ್ ಅವರು, ‘ಪರಿಸರ ಸಂರಕ್ಷಣೆ’ ಕುರಿತು ಸಾಕ್ಷ್ಯಚಿತ್ರದ ಮೂಲಕ ಉಪನ್ಯಾಸ ನೀಡಲಿದ್ದಾರೆ.

ಶಿಬಿರದಲ್ಲಿ ಪಶ್ಚಿಮಘಟ್ಟ ಅರಣ್ಯ ಪ್ರದೇಶದ ಪ್ರಾಮುಖ್ಯತೆ ಮತ್ತು ಸಂರಕ್ಷಣೆ, ಕಲುಷಿತಗೊಳ್ಳುತ್ತಿರುವ ನಾಡಿನ ಜೀವನದಿ ಕಾವೇರಿ ಸಂರಕ್ಷಣೆ, ಕೊಡಗಿನಲ್ಲಿ ಆನೆ-ಮಾನವ ನಡುವಿನ ಸಂಘರ್ಷ, ಅಂತರ್ಜಲ ಕುಸಿತ ಮತ್ತು ಪುನಶ್ಚೇತನ ಕ್ರಮಗಳು ಹಾಗೂ ಘನತ್ಯಾಜ್ಯ ವಸ್ತುಗಳ ಸೂಕ್ತ ವಿಲೇವಾರಿ ಕುರಿತು ಸಮಾಲೋಚನೆ ನಡೆಸಲಾಗುವದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.