ಮಡಿಕೇರಿ, ಆ. 11: ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಪದಾಧಿಕಾರಿಗಳ ಸಭೆ ಇತ್ತೀಚೆಗೆ ಮಡಿಕೇರಿಯಲ್ಲಿ ನಡೆಯಿತು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ತಾ. 19ರಂದು ವಿಶ್ವ ಛಾಯಾಗ್ರಾಹಕರ ದಿನಾಚರಣೆ ನಗರದ ಸರ್ಕಾರಿ ತರಬೇತಿ ಕೇಂದ್ರದಲ್ಲಿ ನಡೆಯಲಿದೆ. ಇದರ ಅಂಗವಾಗಿ ‘ಮುಂಗಾರು ಮಳೆ’ ಕುರಿತ ಛಾಯಾಚಿತ್ರ ಪ್ರದರ್ಶನ ಮತ್ತು ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಲಿದೆ.
ಅಂದು ಬೆಳಿಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಕೊಡಗು ಪ್ರೆಸ್ ಕ್ಲಬ್ನ ಮಾಜಿ ಅಧ್ಯಕ್ಷ ಎಚ್.ಟಿ. ಅನಿಲ್ ಉದ್ಘಾಟಿಸಲಿದ್ದಾರೆ. ಪ್ರಖ್ಯಾತ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಸೇನಾನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ನಾಗೇಶ್ ಪಾಣತ್ತಲೆ ಅವರನ್ನು ಸನ್ಮಾನಿಸಲಾಗುತ್ತದೆ. ಜಿಲ್ಲೆಯ ವಿವಿಧ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮದ ಪ್ರತಿನಿಧಿಗಳಿಗೆ ‘ಮುಂಗಾರು ಮಳೆ’ ವಿಷಯದಲ್ಲಿ ಛಾಯಾಚಿತ್ರ ಸ್ಪರ್ಧೆ ಏರ್ಪಡಿಸಿದ್ದು, ಅಂದು ಖ್ಯಾತ ಛಾಯಾಗ್ರಾಹಕ ಕೃಪಾಕರ ಸೇನಾನಿ ಅವರು ಜಿಲ್ಲೆಯ ಅತ್ಯುತ್ತಮ ಛಾಯಾಗ್ರಾಹಕರನ್ನು ಆಯ್ಕೆ ಮಾಡಲಿದ್ದಾರೆ.
ವಿವಿಧ ಉಪ ಸಮಿತಿ ರಚನೆ : ವಿಶ್ವ ಛಾಯಾಗ್ರಾಹಕರ ದಿನದ ಅಂಗವಾಗಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪ ಸಮಿತಿಯನ್ನು ರಚಿಸಲಾಗಿದೆ. ವೀಡಿಯೋ ಎಡಿಟಿಂಗ್ ತಂಡದಲ್ಲಿ ದಿವಾಕರ್, ನವೀನ್, ಜೀವನ್, ಪವರ್ ಪಾಯಿಂಟ್ ಪ್ರಸ್ತುತಿ, ವಿಘ್ನೇಶ್ ಭೂತನಕಾಡು, ಜೀವನ್, ಛಾಯಾಚಿತ್ರ ಪ್ರದರ್ಶನ ಲಕ್ಷ್ಮೀಶ್, ವಿಜಯ್, ರಾಜ್ ಮುತ್ತಣ್ಣ, ಸ್ಮರಣಿಕೆ ಮಂಜು ಸುವರ್ಣ, ವಿಜಯ್, ಆಹಾರ ಸಮಿತಿ ವಿಜಯ್, ರಂಗಸ್ವಾಮಿ, ಮಲ್ಲಿಕಾರ್ಜುನ್, ವೇದಿಕೆ ಸಮಿತಿ ಮನೋಜ್, ಲಕ್ಷ್ಮೀಶ್, ರಾಜ್ ಮುತ್ತಣ್ಣ ಅವರಿಗೆ ಜವಾಬ್ದಾರಿ ವಹಿಸಲಾಯಿತು.
ಪ್ರದರ್ಶನಕ್ಕೆ ಆಹ್ವಾನ : ಜಿಲ್ಲೆಯಲ್ಲಿ ವಿವಿಧ ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಛಾಯಾಗ್ರಾಹಕರು ತಮ್ಮ ಬಳಿ ಇರುವ ಉತ್ತಮ ಚಿತ್ರಗಳನ್ನು 8/12 ಅಳತೆಯಲ್ಲಿ ಪ್ರಿಂಟ್ ತೆಗೆದು ಲಕ್ಷ್ಮೀಶ್ 9036729351 ಇವರಿಗೆ ಅಥವಾ ಮಡಿಕೇರಿ ಪತ್ರಿಕಾ ಭವನಕ್ಕೆ ತಾ.15ರ ಒಳಗಾಗಿ ತಲಪಿಸುವಂತೆ ಕೋರಲಾಗಿದೆ.