ಮಡಿಕೇರಿ, ನ. 27: ಜೋಡುಪಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಎ.ಬಿ. ಮಾಧವ ಮತ್ತು ಬಳಗದವರಿಂದ ವಿಶೇಷ ಘಟಕ ಯೋಜನೆಯಡಿ “ನರಕಾಸುರ ಮೋಕ್ಷ” ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.

ಯಕ್ಷಗಾನ ಪ್ರದರ್ಶನದ ಮೊದಲು ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾಡಳಿತ ಮಂಡಳಿಯ ಅಧ್ಯಕ್ಷ ಕೆ.ಎಸ್. ಶೇಷಪ್ಪ ಆಚಾರಿ ಅಧ್ಯಕ್ಷತೆ ವಹಿಸಿದ್ದರು.

ಶಾಲಾಡಳಿತ ಮಂಡಳಿಯ ಮಾಜಿ ಅಧ್ಯಕ್ಷರಾದ ಕೆ.ಆರ್. ರಾಜು ಚಂಡೆ ಬಾರಿಸುವದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಯಕ್ಷಗಾನ ವಿದ್ಯಾರ್ಥಿಗಳಿಗೆ ಶಿಬಿರಾರ್ಥಿಗಳಿಗೆ ಹಾಗೂ ಎಲ್ಲರಿಗೂ ಉತ್ತಮ ಮನೋರಂಜನೆ ನೀಡುವ ಕಲೆಯಾಗಿದೆ. ವಿದ್ಯಾರ್ಥಿಗಳಿಗೆ ಪಠ್ಯ ಚಟುವಟಿಕೆಯಂತೆ ಇಂತಹ ಕಾರ್ಯಕ್ರಮಗಳು ಮನೋರಂಜನೆಯೊಂದಿಗೆ ಪುರಾಣ ಮಹಾಭಾರತ ಹಾಗೂ ರಾಮಾಯಣದ ಶಿಕ್ಷಣವನ್ನು ಒದಗಿಸುತ್ತದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಧಮಯಂತಿ ಅವರು ಕೊಡಗಿನಲ್ಲಿ ಯಕ್ಷಗಾನ ವಿರಳವಾಗಿದ್ದು, ದಕ್ಷಿಣ ಕನ್ನಡದಲ್ಲಿ ಹೆಚ್ಚಾಗಿದ್ದು ಎಳವೆಯಲ್ಲಿಯೇ ಮಕ್ಕಳಿಗೆ ಯಕ್ಷಗಾನದ ತಿಳುವಳಿಕೆಯಿರುತ್ತದೆ. ಇಂತಹ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಮಾಧವ ಅವರ ಪ್ರಯತ್ನದಿಂದ ನಮ್ಮ ಶಾಲೆಯಲ್ಲಿ ಯಕ್ಷಗಾನ ಪ್ರದರ್ಶನ ಹಾಗೂ ತರಬೇತಿ ನೀಡುವದರ ಮೂಲಕ ವಿದ್ಯಾರ್ಥಿಗಳಿಗೆ ಯಕ್ಷಗಾನದ ತಿಳುವಳಿಕೆ ನೀಡುತ್ತಿದ್ದಾರೆ ಎಂದರು.

ವೇದಿಕೆಯಲ್ಲಿ ಶಾಲಾ ಶಿಕ್ಷಕಿ ಅಮರಾವತಿ ಹಾಗೂ ಅಂಗನವಾಡಿ ಶಿಕ್ಷಕಿ ಮನೋಹರಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಇತ್ತೀಚೆಗೆ ಸುಳ್ಯದಲ್ಲಿ ಯಕ್ಷಗಾನ ಪ್ರದರ್ಶನ ಒಂದರಲ್ಲಿ ಪಾಲ್ಗೊಂಡು ಆಕಸ್ಮಿಕವಾಗಿ ವೇದಿಕೆಯಿಂದ ಕೆಳಗೆ ಬಿದ್ದು ಕಾಲಿನ ಮೂಳೆ ಮುರಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಯುವ ಕಲಾವಿದ ಲಕ್ಷ್ಮೀಶ ಸುಬ್ರಹ್ಮಣ್ಯ ಅವರಿಗೆ ಓಂಕಾರೇಶ್ವರ ಪ್ರವಾಸಿ ಯಕ್ಷಗಾನ ತಂಡದ ಸಂಚಾಲಕ ಕೆ. ಮಹಾಬಲೇಶ್ವರ ಭಟ್ ಕಿರುಕಾಣಿಕೆಯನ್ನು ಚಿಕಿತ್ಸೆಗಾಗಿ ನೀಡಿದರು. ವೇದಿಕೆಯಲ್ಲಿದ್ದ ಗಣ್ಯರು ಶಾಲುಹೊದಿಸಿ, ಫಲತಾಂಬೂಲ ನೀಡಿ ಗೌರವಿಸಿದರು.

ಗೌರವ ಸ್ವೀಕರಿಸಿದ ಲಕ್ಷ್ಮೀಶರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೇಷಪ್ಪ ಆಚಾರ್ಯ ಮಾತನಾಡಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯವರು ಅನೇಕ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಫಲಾನುಭವಿಗಳು ಅದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಣಜೂರು ಮಂಜುನಾಥ್ ಉಪಸ್ಥಿತರಿದ್ದು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಆಯೋಜಕ ಮಾಧವ ಸ್ವಾಗತಿಸಿ, ಗೌರವಿಸಿದರು. ಶಾಲಾ ದೈಹಿಕ ಶಿಕ್ಷಕಿ ಪಿ.ಟಿ. ಮೀನಾಕ್ಷಿ ವಂದಿಸಿದರು. ಭೋಜನದ ನಂತರ ಯಕ್ಷಗಾನ ನರಕಾಸುರ ಮೋಕ್ಷ ಪ್ರದರ್ಶನಗೊಂಡಿತು.