ವೀರಾಜಪೇಟೆ: ಶ್ರೀಮಂತಿಕೆಯನ್ನು ಹೊಂದಿರುವ ಕನ್ನಡ ಭಾಷೆಯ ಸಂಸ್ಕøತಿ ವಿಶ್ವ ಮಟ್ಟದಲ್ಲಿ ಪ್ರತಿಬಿಂಬಿತವಾಗಿದೆ. ಕನ್ನಡದ ನೆಲ ಜಲ ರಕ್ಷಣೆಗೆ ಕನ್ನಡ ಪರ ಸಂಘಟನೆಗಳ ನಿರಂತರ ಶ್ರಮ ಅಗತ್ಯ ಎಂದು ಜನತಾ ದಳದ ಜಿಲ್ಲಾ ಸಮಿತಿ ಅಧ್ಯಕ್ಷ, ಸಮಾಜ ಸೇವಕ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ವೀರಾಜಪೇಟೆ ಕರ್ನಾಟಕ ಸಂಘದ ವತಿಯಿಂದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಕೇತ್ ಅವರು ಗಡಿ ಭಾಗಗಳಲ್ಲಿ ಕನ್ನಡದ ಮೇಲೆ ನಿರಂತರವಾಗಿ ಧಾಳಿ ನಡೆಯುತ್ತಿದೆ. ಇದನ್ನು ತಪ್ಪಿಸಲು ಕನ್ನಡ ಭಾಷೆ, ಸಾಹಿತ್ಯವನ್ನು ಉಳಿಸಿ ಬೆಳೆಸುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಅನ್ಯ ರಾಜ್ಯದವರನ್ನು ಪ್ರೀತಿಯ ಮನೋಭಾವದಿಂದ ಕಂಡು ಅವರಿಗೆ ಕನ್ನಡವನ್ನು ಕಲಿಸುವ ಕೆಲಸ ಆಗಬೇಕು, ಗಡಿಭಾಗದಲ್ಲಿ ಕನ್ನಡ ಕಲಿಕಾ ಕೇಂದ್ರಗಳು ಹೆಚ್ಚು ಹೆಚ್ಚಾಗಿ ಸ್ಥಾಪನೆಗೊಳ್ಳಬೇಕು, ಕನ್ನಡ ನೆಲದ ಪ್ರತಿಯೊಬ್ಬರಿಗೂ ಕನ್ನಡ ಭಾಷೆಯ ಅರಿವಿರಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೋಂಡ ಶಶಿ ಸುಬ್ರಮಣಿ ಮಾತನಾಡಿ, ನಮ್ಮ ಮಾತೃ ಭಾಷೆ ಯಾವದೇ ಇರಲಿ, ಕನ್ನಡ ಭಾಷೆ ಪರಿಪೂರ್ಣವಾದ ಭಾಷೆಯಾಗಿದೆ. ಯಾವದೇ ಸಂಘಟನೆಗಳು ರಾಜಕೀಯ ರಹಿತವಾಗಿ ನಿಸ್ವಾರ್ಥ ಸೇವೆಯಿಂದ ಕಾರ್ಯ ನಿರ್ವಹಿಸಿದರೆ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡದ ನಾಮಫಲಕಗಳನ್ನು ಅಳವಡಿಸುವಂತೆ ಸೂಚನೆ ನೀಡುವಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಅವರನ್ನು ಮನವಿ ಮಾಡಿಕೊಂಡರು.

ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಮಾಳೇಟಿರ ಬೆಲ್ಲು ಬೋಪಯ್ಯ ವಹಿಸಿದ್ದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ, ಸಂಘದ ಉಪಾಧ್ಯಕ್ಷ ಅಪ್ಪನೆರವಂಡ ಜೋಯಪ್ಪ, ಮಾಜಿ ಅಧ್ಯಕ್ಷ ಚಿಲ್ಲವಂಡ ಕಾವೇರಪ್ಪ, ತೂಕ್ ಬೊಳಕ್ ವಾರಪತ್ರಿಕೆಯ ಸಂಪಾದಕ ಮುಲ್ಲೇಂಗಡ ಶಂಕರಿ ಪೂವಯ್ಯ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಮಾಜ ಸೇವೆಗಾಗಿ ಮುಲ್ಲೇಂಗಡ ಶಂಕರಿ ಪೊನ್ನಪ್ಪ, ರಾಜ್ಯ ಪ್ರಶಸ್ತಿ ವಿಜೇತೆ ಚೆನ್ನಯ್ಯನ ಕೋಟೆ ಪ್ರಾಥಮಿಕ ಶಾಲಾ ಶಿಕ್ಷಕಿ ಬಿ.ಬಿ. ಜಾಜಿ, ರಾಷ್ಟ್ರೀಯ ಹಾಕಿ ಆಟಗಾರ ಚೇಂದಂಡ ಬೋಪಣ್ಣ ಇವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯದರ್ಶಿ ಅರುಣ್ ಅಪ್ಪಣ್ಣ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ನಾಣಯ್ಯ ಸ್ವಾಗತಿಸಿದರು. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಪೈಪೋಟಿ ಕಾರ್ಯಕ್ರಮ ನಡೆಯಿತು.