ಆಲೂರು-ಸಿದ್ದಾಪುರ, ಅ. 5: ಆಲೂರು-ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಜಿ.ಪಂ. ಮತ್ತು ತಾ.ಪಂ. ಅನುದಾನದಲ್ಲಿ ಬಿಡುಗಡೆಯಾದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಜಿ.ಪಂ.ಯಿಂದ ರೂ. 4.59 ಲಕ್ಷ ಮತ್ತು ತಾ.ಪಂ.ಯಿಂದ ರೂ. 78 ಸಾವಿರ ಅನುದಾನ ಸೇರಿದಂತೆ ಒಟ್ಟು ರೂ. 5.38 ಲಕ್ಷ ವೆಚ್ಚದಲ್ಲಿ ಮಾಲಂಬಿ ಮಲ್ಲೇಶ್ವರ ಗ್ರಾಮಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಮಾಲಂಬಿ ಗ್ರಾಮದ ಬೊಕ್ವಾಳನಕೆರೆ ದಂಡೆಗೆ ರಸ್ತೆ ಡಾಂಬರಿಕರಣಕ್ಕಾಗಿ ಜಿ.ಪಂ.ಯಿಂದ ರೂ. 2 ಲಕ್ಷ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ರಸ್ತೆ ಡಾಂಬರಿಕರಣದ ಕಾಮಗಾರಿ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಆಲೂರು-ಸಿದ್ದಾಪುರ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಜಿ.ಪಂ. ಸದಸ್ಯೆ ಸರೋಜಮ್ಮ, ತಾ.ಪಂ. ಸದಸ್ಯೆ ಲೀಲಾವತಿ ಮಹೇಶ್ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭ ಗ್ರಾ.ಪಂ. ಮಾಜಿ ಸದಸ್ಯ ಪಿ.ಎನ್. ಗಂಗಾಧರ್, ಪ್ರಮುಖರಾದ ಹೆಚ್.ಎಸ್. ವಿಶ್ವನಾಥ್, ಸುಬ್ರಮಣಿ, ಪೊನ್ನು, ರವಿ, ಮಧು, ವರುಣೇಶ್, ಮಾಲಂಬಿ ವಿನಾಯಕ ಯುವಕ ಸಂಘದ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.