ಸೋಮವಾರಪೇಟೆ, ನ. 26: ವಿವಾಹ ನಿಶ್ಚಯಗೊಂಡಿದ್ದ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರಕ್ಕೆ ಸಮೀಪದ ಆಲೇಕಟ್ಟೆಯಲ್ಲಿ ಇಂದು ನಡೆದಿದ್ದು, ವಿವಾಹ ಸಂಭ್ರಮದಲ್ಲಿರಬೇಕಿದ್ದ ಕುಟುಂಬ ವರ್ಗ ಶೋಕಸಾಗರದಲ್ಲಿ ಮುಳುಗಿದೆ.ಆಲೇಕಟ್ಟೆ ನಿವಾಸಿ ದಿ. ಕೃಷ್ಣ ಮತ್ತು ಜಯಲಕ್ಷ್ಮಿ ಅವರ ಪುತ್ರ, ಕಥಾರ್‍ನಲ್ಲಿ ಇಂಜಿನಿಯರ್ ಕೆಲಸ ನಿರ್ವಹಿಸುತ್ತಿರುವ ಸಂದೇಶ್ (ವಿಜು-28) ಎಂಬಾತನೇ ವಿಷ ಸೇವಿಸಿ ಅತ್ಮಹತ್ಯೆಗೆ ಶರಣಾದವನಾಗಿದ್ದು, ಕೇರಳದ ಯುವತಿಯೊಂದಿಗೆ ವಿವಾಹ ನಿಶ್ಚಯಗೊಂಡಿತ್ತು. ಇಂದು ಮದುವೆಯ ಆಮಂತ್ರಣ ಪತ್ರವನ್ನು ಮನೆಗೆ ತರಲಾಗಿದ್ದು, ನೆಂಟರಿಷ್ಟರಿಗೆ ವಿತರಿಸಲು ಮನೆಯವರು ಸಿದ್ಧತೆ ನಡೆಸಿದ್ದರು. ಈ ಮಧ್ಯೆ ಯುವಕ ವಿಷ ಸೇವಿಸಿದ್ದು, ಅಸ್ವಸ್ಥಗೊಂಡ ಸಂದೇಶ್‍ನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.

ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ ನಂತರ ಕಳೆದ ಕೆಲ ವರ್ಷಗಳಿಂದ ಕಥಾರ್‍ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ಸಂದೇಶ್‍ಗೆ ಕೇರಳದ ಯುವತಿಯೊಂದಿಗೆ ವಿವಾಹ ನಿಶ್ಚಯಗೊಂಡಿತ್ತು. ಜನವರಿ 1ರಂದು ಧರ್ಮಸ್ಥಳದಲ್ಲಿ ವಿವಾಹ, ಜನವರಿ 3ರಂದು ಸೋಮವಾರಪೇಟೆಯ ಕೊಡವ ಸಮಾಜದಲ್ಲಿ ಆರತಕ್ಷತೆ ನಡೆಸಲು ಕುಟುಂಬ ನಿರ್ಧರಿಸಿತ್ತು. ಮದುವೆಯ ಹಿನ್ನೆಲೆ ಕಳೆದ ಶನಿವಾರವಷ್ಟೇ ಕಥಾರ್‍ನಿಂದ ಮನೆಗೆ ಆಗಮಿಸಿದ್ದ ಸಂದೇಶ್ ಇಂದು ಯಾರಿಗೂ ತಿಳಿಸದೇ ವಿಷ ಸೇವಿಸಿದ್ದು, ಇಹಲೋಕ ತ್ಯಜಿಸಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.