ಮಡಿಕೇರಿ, ಸೆ. 15: ಭಾರತೀಯ ಜೀವ ವಿಮಾ ನಿಗಮದ ವಜ್ರ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ವಿಮಾ ಸಪ್ತಾಹ ಸಮಾರೋಪಗೊಂಡಿದೆ.
ನಗರದ ಶಾಖಾ ಕಚೇರಿಯಲ್ಲಿ ನಡೆದ ಅಂತಿಮ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅಪರ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್, ಕಳೆದ 60 ವರ್ಷಗಳಲ್ಲಿ ಎಲ್ಐಸಿ ಮಾಡಿದ ಸಾಧನೆಯ ಬಗ್ಗೆ ಶ್ಲಾಘಿಸಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಭಾರತೀಯ ಜೀವ ವಿಮಾ ನಿಗಮ ಸಾರ್ವಜನಿಕರಲ್ಲಿ ತನ್ನದೇ ಆದ ಛಾಪÀನ್ನು ಮೂಡಿಸಿದ್ದು, ಪ್ರತಿನಿಧಿಗಳ ಶ್ರಮ ಅವಿಸ್ಮರಣೀಯವೆಂದರು. ಸಂಸ್ಥೆ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಮತ್ತಷ್ಟು ಯಶಸ್ಸನ್ನು ಸಾಧಿಸಲಿ ಎಂದು ಸತೀಶ್ ಕುಮಾರ್ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಖಾಧಿಕಾರಿ ಗಳಾದ ಎಂ.ಎಸ್. ಜೀವನ್ ಕುಮಾರ್ ಮಾತನಾಡಿ, ನಿಗಮ ನಡೆದು ಬಂದ ಹಾದಿ ಹಾಗೂ ಅದರ ಸಾಧನೆಗಳ ಬಗ್ಗೆ ವಿವರಿಸಿದರು. ರಾಷ್ಟ್ರದ ಅಭಿವೃದ್ಧಿ ಕಾರ್ಯಗಳಿಗೆ ನಿರಂತರ ಆರ್ಥಿಕ ನೆರವು ನೀಡುವದರಲ್ಲಿ ಭಾರತೀಯ ಜೀವ ವಿಮಾ ನಿಗಮದ ಪಾಲೂ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ವಿಮಾ ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳು, ಪ್ರತಿನಿಧಿಗಳು ಹಾಗೂ ಸಿಬ್ಬಂದಿಗಳಿಗಾಗಿ ನಡೆದ ಭಾವಗೀತೆ, ಪ್ರಬಂಧ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧಾ ವಿಜೇತರಿಗೆ ಅತಿಥಿಗಳು ಇದೇ ಸಂದರ್ಭ ಬಹುಮಾನ ವಿತರಿಸಿದರು. ವಿಮಾ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಪ್ರತಿನಿಧಿಗಳನ್ನು ಇದೇ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವಿಮಾ ಸಪ್ತಾಹದ ವರದಿಯನ್ನು ಶ್ವೇತ ಅವರು ವಾಚಿಸಿದರೆ, ಅಧಿಕಾರಿ ಪ್ರಸನ್ನ ಕಾರ್ಯಕ್ರಮವನ್ನು ನಿರೂಪಿಸಿದರು. ಅಭಿವೃದ್ಧಿ ಅಧಿಕಾರಿ ಕೆ.ಸಿ. ನಟರಾಜ್ ಸ್ವಾಗತಿಸಿ, ಪ್ರತಿನಿಧಿ ಕೆ.ಎ. ತಿಮ್ಮಯ್ಯ ವಂದಿಸಿದರು.