ಸೋಮವಾರಪೇಟೆ, ಜು.7: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಫಸಲ್ ಭೀಮಾ ಮತ್ತು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಕಾಫಿ ಹಾಗೂ ಇತರ ಬೆಳೆಗಳನ್ನು ಕೈಬಿಟ್ಟಿರುವದು ಖಂಡನೀಯ ಎಂದು ತಾಲೂಕು ಕಾಫಿ ಬೆಳೆಗಾರರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಳೆಗಾರರ ಸಂಘದ ಪ್ರಮುಖ ಹಾಗೂ ಮಾಜೀ ಎಂಎಲ್‍ಸಿ ಎಸ್.ಜಿ. ಮೇದಪ್ಪ, ಪಶ್ಚಿಮಘಟ್ಟದ ಮಲೆನಾಡು ಪ್ರದೇಶ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಶೇ.90ರಷ್ಟು ಮಂದಿ ಕಾಫಿ ಬೆಳೆಗಾರರಿದ್ದಾರೆ. ಆದರೂ ಕೂಡ ಯೋಜನೆಯಲ್ಲಿ ಕಾಫಿ, ಏಲಕ್ಕಿ, ಶುಂಠಿ, ಬಾಳೆ ಸೇರಿದಂತೆ ಇತರ ಪ್ರಮುಖ ಬೆಳೆಗಳನ್ನು ಸೇರಿಸದೆ ಕೊಡಗಿನ ಜನರಿಗೆ ಸರ್ಕಾರಗಳು ಅನ್ಯಾಯ ಮಾಡುತ್ತಿವೆ ಎಂದು ಆರೋಪಿಸಿದರು.

ಕಳೆದ ಹಲವಾರು ವರ್ಷಗಳಿಂದ ಅಕಾಲಿಕ ಮಳೆಯಿಂದ ಕಾಫಿ ಫಸಲು ನಷ್ಟವಾಗಿ ಬೆಳೆÀಗಾರರು ಸಾಲಗಾರರಾಗಿದ್ದಾರೆ. ಉತ್ಪಾದನಾ ವೆಚ್ಚವೂ ಜಾಸ್ತಿಯಾಗುತ್ತಿದೆ. ಹಲವಾರು ರೈತರು ಕಾಫಿ ತೋಟಗಳನ್ನು ಪಾಳುಬಿಟ್ಟಿದ್ದಾರೆ. ಕೊಡಗಿನಲ್ಲಿ ಕಾಫಿ ನಶಿಸುತ್ತಿದೆ. ಈ ಬಗ್ಗೆ ಮಾಹಿತಿಯಿ ದ್ದರೂ ಕೇಂದ್ರ ಸರ್ಕಾರದ ಫಸಲ್ ಭೀಮಾ ಯೋಜನೆ, ರಾಜ್ಯ ಸರ್ಕಾರದ ಹವಾಮಾನ ಆಧಾರಿತ ವಿಮಾ ಯೋಜನೆಯಲ್ಲಿ ಕಾಫಿಯನ್ನು ಸೇರಿಸದಿರುವದು ಸರಿಯಾದ ಕ್ರಮವಲ್ಲ. ಜಿಲ್ಲಾಧಿಕಾರಿಗಳು ಕೂಡಲೆ ಮಧ್ಯಪ್ರವೇಶಿಸಿ, ಕಾಫಿ ಮತ್ತಿತರ ಬೆಳೆಗಳನ್ನು ವಿಮಾ ಯೋಜನೆಯಡಿ ಯಲ್ಲಿ ಸೇರಿಸಲು ಸರ್ಕಾರಗಳಿಗೆ ಶಿಫಾರಸು ಮಾಡಬೇಕೆಂದು ಆಗ್ರಹಿಸಿದರು.

ಮುಂದಿನ ಹತ್ತು ದಿನಗಳ ಒಳಗೆ ಯೋಜನೆಯಡಿ ಕಾಫಿ ಮತ್ತಿತರ ಬೆಳೆಗಳನ್ನು ಸೇರಿಸಬೇಕು. ತಪ್ಪಿದಲ್ಲಿ ಕಾಫಿ ಬೆಳೆಗಾರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು.

ವಿಮಾ ಯೋಜನೆಯಡಿ ಕೊಡಗು ಹಾಗೂ ಮಲೆನಾಡು ಜಿಲ್ಲೆಗಳ ಜೀವನಾಧಾರ ಬೆಳೆಗಳನ್ನು ಸೇರಿಸುವ ಬಗ್ಗೆ ಸಂಸದ ಪ್ರತಾಪ್ ಸಿಂಹ ಹಾಗೂ ಜಿಲ್ಲೆಯ ಶಾಸಕರಿಬ್ಬರೂ ಹೋರಾಟ ಮಾಡ ಬೇಕು. ಆದರೆ ಇವರ ಮೌನದಿಂದ ಜಿಲ್ಲೆಯ ಕಾಫಿ ಬೆಳೆಗಾರರು ಸಮಸ್ಯೆಗೆ ಸಿಲುಕುವಂತಾಗಿದೆ ಎಂದು ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಬಿ.ಎಂ.ಲವ ದೂರಿದರು. ಅಡಿಕೆ ಬೆಳೆಗಾರರ ಲಾಭಿ ಹಾಗು ಅಲ್ಲಿನ ಜನಪತ್ರಿನಿಧಿಗಳ ಜನಪರ ಹೋರಾಟದ ಫಲವಾಗಿ ಅಡಿಕೆ ಬೆಳೆ ಫಸಲ್ ಭೀಮಾ ಯೋಜನೆಗೆ ಸೇರ್ಪಡೆಗೊಂಡಿದೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಫಿ ಬೆಳೆಗಾರರನ್ನೇ ಯಾಕೆ ಕಡೆಗಣಿಸುತ್ತಿವೆ? ಎಂಬದು ಯಕ್ಷ ಪ್ರಶ್ನೆಯಾಗಿದೆ ಎಂದು ಬೆಳೆಗಾರ ಬಿ.ಎಸ್.ಅನಂತರಾಮ್ ಪ್ರಶ್ನಿಸಿದರು. ಗೋಷ್ಠಿಯಲ್ಲಿ ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಎಸ್.ಪಿ. ಪೊನ್ನಪ್ಪ, ಕಾಫಿ ಬೆಳೆಗಾರರ ಸಂಘದ ಕಾರ್ಯದರ್ಶಿ ತಾಕೇರಿ ಪ್ರಕಾಶ್, ಮಾಜಿ ಕಾರ್ಯದರ್ಶಿ ಸೋಮಶೇಖರ್ ಇದ್ದರು.