ಶ್ರೀಮಂಗಲ, ಜು. 14: ಕಳೆದ ಒಂದು ತಿಂಗಳಿನಿಂದ ದಕ್ಷಿಣ ಕೊಡಗಿನ ಅರಣ್ಯ ಪ್ರದೇಶದ ಅಂಚಿನಲ್ಲಿರುವ ನಾಗರಹೊಳೆ ಮತ್ತು ಬ್ರಹ್ಮಗಿರಿ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಕುಟ್ಟ, ನಾಲ್ಕೇರಿ, ಕೆ. ಬಾಡಗ ಮತ್ತು ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆ ಹಿಂಡುಗಳನ್ನು ಅರಣ್ಯಕ್ಕೆ ಅಟ್ಟುವ ಪೊಲೀಸ್ ಇಲಾಖೆಯ ಸಹಕಾರ ದೊಂದಿಗೆ ಅರಣ್ಯ ಇಲಾಖೆ ಕೈಗೊಂಡಿದ್ದ ಎರಡು ದಿನದ ಕಾರ್ಯಾಚರಣೆ ಗುರುವಾರ ಸಂಜೆಗೆ ಅಂತ್ಯವಾಗಿದ್ದು, ಫಲಿತಾಂಶ ಶೂನ್ಯವಾಗಿದೆ.

ತಾ. 13 ರಿಂದ ಆರಂಭವಾಗಿದ್ದ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ 65 ಸಿಬ್ಬಂದಿಗಳು ಸೇರಿದಂತೆ ಪೊಲೀಸ್ ಇಲಾಖೆಯ ಮೀಸಲು ಪಡೆ ನಿಯೋಜಿಸಲಾಗಿತ್ತು. ಇದರೊಂದಿಗೆ ಸ್ಥಳೀಯರೂ ಸೇರಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಕಾರ್ಯಾಚರಣೆಯ ಮೊದಲ ದಿನ ಕುಟ್ಟ ಗ್ರಾ.ಪಂ. ವ್ಯಾಪ್ತಿಯ ತೈಲ ಗ್ರಾಮದ ಕಾಫಿ ತೋಟದಲ್ಲಿ 22 ಕಾಡಾನೆಗಳು ಬೀಡು ಬಿಟ್ಟಿರುವದನ್ನು ಅರಣ್ಯ ಇಲಾಖೆ ಪತ್ತೆ ಹಚ್ಚಿ ಅವುಗಳನ್ನು ಅರಣ್ಯಕ್ಕೆ ಅಟ್ಟಲು ಮುಂದಾಯಿತು. ಆದರೆ ಮೊದಲ ದಿನ ಆ ಗ್ರಾಮದಿಂದ ಕಾಡಾನೆಗಳನ್ನು ಅರಣ್ಯಕ್ಕೆ ಸೇರಿಸಲು ವಿಫಲವಾಯಿತು. ಅದೇ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟದೊಳಗೆ ಸೇರಿಕೊಂಡು ಗುಂಪು ಬೇರ್ಪಟ್ಟು ದೊಡ್ಡ ತಲೆನೋವು ತಂದೊಡ್ಡಿತ್ತು. ಎರಡನೇ ದಿನ ಕಾಡಾನೆಗಳ ಹಿಂಡು ತೈಲ ಗ್ರಾಮದಿಂದ ಸಮೀಪದ ಮಂಚಳ್ಳಿ ಗ್ರಾಮಕ್ಕೆ ರಾತ್ರಿ ಸಮಯದಲ್ಲಿ ತೆರಳಿರುವದರ ಜಾಡು ಹಿಡಿದ ಅರಣ್ಯ ಇಲಾಖೆ ಮಂಚಳ್ಳಿ ಗ್ರಾಮದ ಕುರಿಮಲೆ ಸಮೀಪ ಕ್ಯಾಲಿಫೋರ್ನಿಯ ತೋಟದಲ್ಲಿ ಕಾಡಾನೆ ಹಿಂಡು ಬೀಡು ಬಿಟ್ಟಿರುವದನ್ನು ಪತ್ತೆ ಹಚ್ಚಿ ಕಾರ್ಯಾಚರಣೆ ಮುಂದುವರೆಸಿತ್ತು.

ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಸಂದರ್ಭ ಆನೆಗಳು ಅರಣ್ಯಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದು, ಅವುಗಳು ಮತ್ತೆ ವಾಪಸ್ಸು ತೋಟದೊಳಗೆ ಬರುತ್ತಿರುವದರಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಅಸಹಾಯಕರಾಗುವಂತೆ ಮಾಡಿದೆ. ಗರ್ಭಿಣಿ ಆನೆ ಹಾಗೂ 6 ಮರಿಗಳು ಇದ್ದುದರಿಂದ ಕಾರ್ಯಾಚರಣೆಗೆ ಹಿನ್ನಡೆಯಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಎರಡು ದಿನದಿಂದ ನಡೆದ ಕಾರ್ಯಾಚರಣೆಯ ಯಾವದೇ ಫಲ ನೀಡದೆ ವಿಫಲ ಕಂಡಿದೆ.

ಕಾರ್ಯಾಚರಣೆಯಲ್ಲಿ ಜಿ.ಪಂ. ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ, ತಾ.ಪಂ. ಸದಸ್ಯ ಪೋಯಿಲೆಂಗಡ ಪಲ್ವಿನ್ ಪೂಣಚ್ಚ, ಮಡಿಕೇರಿ ವನ್ಯಜೀವಿ ವಿಭಾಗದ ಎ.ಸಿ.ಎಫ್. ಪಿ.ಎ. ಸೀಮಾ, ತಿತಿಮತಿ ಎಸಿಎಫ್ ಸೂರ್ಯಸೇನ್, ಶ್ರೀಮಂಗಲ ಆರ್.ಎಫ್.ಓ. ಪೌಲ್ ಆಂಟೋನಿ, ಪೊನ್ನಂಪೇಟೆ ಆರ್.ಎಫ್.ಓ. ಪಿ.ಪಿ. ಉತ್ತಪ್ಪ, ಕುಟ್ಟ ವೃತ್ತ ನಿರೀಕ್ಷಕ ಸಿ.ಎನ್. ದಿವಾಕರ್, ಶ್ರೀಮಂಗಲ ಠಾಣಾಧಿಕಾರಿ ಶ್ರೀಧರ್, ಅಕ್ರಮ-ಸಕ್ರಮ ಸಮಿತಿ ಸದಸ್ಯ ಹೆಚ್.ವೈ. ರಾಮಕೃಷ್ಣ, ಹೊಟ್ಟೆಂಗಡ ಪ್ರಕಾಶ್, ಕೊಡಗು ವನ್ಯ ಜೀವಿ ಸಂಘದ ಕುಂಞಂಗಡ ಬೋಸ್ ಮಾದಪ್ಪ, ತೀತೀರ ಕಾರ್ಯಪ್ಪ, ವೃಂದ ಕಾರ್ಯಪ್ಪ, ಚೆಕ್ಕೇರ ಕೌಶಿಕ್, ಚೇತಕ್, ಕ್ಯಾಲಿಫೋರ್ನಿಯ ತೋಟದ ಮಾಚಿಮಾಡ ರಾಜು, ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಜಿಲ್ಲಾ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಗಳು ಭಾಗವಹಿಸಿದ್ದರು.