ಗೋಣಿಕೊಪ್ಪಲು, ಜ. 16 : ಕಾಡಾನೆ ಹಾವಳಿ, ಕುಡಿಯುವ ನೀರಿನ ಸಮಸ್ಯೆ, ಅರಣ್ಯ ಇಲಾಖೆ ಕಿರುಕುಳ, ಸಿಗದ ಹಕ್ಕು ಪತ್ರ ಮೊದಲಾದ ಸಮಸ್ಯೆಗಳನ್ನು ತಿತಿಮತಿ ಸಮೀಪದ ವಿವಿಧ ಹಾಡಿಗಳ ಗಿರಿಜನರು ಮಾಜಿ ಉಪ ಮುಖ್ಯ ಮಂತ್ರಿ ಆರ್. ಅಶೋಕ್ ಅವರ ಮುಂದೆ ಹೇಳಿಕೊಂಡರು.ತಿತಿಮತಿ ಸಮೀಪದ ಆಯಿರ ಸುಳಿ, ಜಂಗಲ್ಹಾಡಿ, ಚೇಣಿ ಹಡ್ಲು ಹಾಡಿಗಳಿಗೆ ಬರ ಅಧ್ಯನ ಕೈಗೊಂಡ ಆರ್. ಆಶೋಕ್ ಅವರ ಬಳಿ ಗಿರಿಜನ ಹಾಡಿಯ ಮುಖಂಡ ಸುಬ್ರು ಮಾತನಾಡಿ ಈ ಬಾರಿ ಮಳೆ ಕಡಿಮೆ ಯಾದ್ದರಿಂದ ಹಾಡಿಗಳಲ್ಲಿ ಕುಡಿ ಯಲು ನೀರಿಲ್ಲದಂತಾಗಿದೆ. ಗದ್ದೆಯಲ್ಲಿ ಬೆಳೆದಿದ್ದ ಬೆಳೆಗಳು ಒಣಗಿ ಹೋಗಿವೆ. ಕಾಡಾನೆಗಳ ಕಾಟದಿಂದ ಬೆಳೆ, ಕಾಫಿ ನಷ್ಟವಾಗಿದೆ.ರಾತ್ರಿಯಾದ ಕೂಡಲೆ ಕಾಡಾನೆಗಳು ನೇರವಾಗಿ ಗುಡಿಸಿಲಿನ ಮೇಲೆ ಧಾಳಿ ಮಾಡಿ ಹಾಡಿ ಜನರಿಗೆ ಜೀವಭಯ ಮೂಡಿಸಿವೆ ಎಂದು ಹೇಳಿದರು.
ನೂರಾರು ವರ್ಷಗಳಿಂದ ಹಾಡಿಯಲ್ಲಿ ನೆಲೆಸಿದ್ದರೂ ಜಾಗದ ಹಕ್ಕು ಪತ್ರ ಲಭಿಸಿಲ್ಲ. ಅರಣ್ಯ ಇಲಾಖೆಯವರು ಹೊರಗಿನಿಂದ ಯಾವದೇ ವಸ್ತುಗಳನ್ನು ತರಲು ಬಿಡುತ್ತಿಲ್ಲ. ಜತೆಗೆ ಎತ್ತಂಗಡಿ ಮಾಡಿಸಲು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಹಕ್ಕು ಪತ್ರ ಕೊಡಿಸಿ, ಕುಡಿಯುವ ನೀರಿಗೆ ಬಾವಿ ತೋಡಿಸಿ, ಕಾಡಾನೆ ಹಾವಳಿಯನ್ನು ತಡೆಗಟ್ಟಿ ಆತಂಕವನ್ನು ದೂರ ಮಾಡಿ, ಅರಣ್ಯ ಇಲಾಖೆಯವರ ಕಿರುಕುಳವನ್ನು ತಡೆಯಿರಿ ಎಂದು ಮನವಿ ಮಾಡಿದÀರು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಜತೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವದು ಎಂದು ಆರ್. ಅಶೋಕ್ ಹೇಳಿದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ತೇಜಶ್ವಿನಿ ಗೌಡ, ಉಪಾಧ್ಯಕ್ಷ ಬಿ.ಸೋಮಶೇಖರ್, ಮಾಜಿ ಸಂಸದ ಮಾಜಿ ಸಚಿವ ಅಶ್ವತ್ಥ್ ನಾರಾಯಣ, ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಪುಟ್ಟಸ್ವಾಮಿ, ಶಾಸಕ. ಕೆ.ಜಿ.ಬೋಪಯ್ಯ, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಮನು ಮುತ್ತಪ್ಪ, ತಾಲೂಕು ಅಧ್ಯಕ್ಷ ಅರುಣ್ ಭೀಮಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಯಮುನಾ ಚಂಗಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ.ಬೋಪಣ್ಣ, ಮಾಜಿ ಸದಸ್ಯೆ ಕಾಂತಿ ಸತೀಶ್, ರಂಜನ್ ವಂಗಪ್ಪ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಚಲನ್ ಕುಮಾರ್, ತಿತಿಮತಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಎನ್.ಎನ್.ಅನೂಪ್, ಗ್ರಾಮ ಪಂಚಾಯಿತಿ ಸದಸ್ಯರಾದ ಸಿದ್ದರಾಜು, ವಿಜಯಾ, ಪೊನ್ನು, ಮುಖಂಡರಾದ ಕಿಲನ್ ಗಣಪತಿ, ಚೆಪ್ಪುಡೀರ ಮಾಚು, ದಾದು ಪೂವಯ್ಯ, ಮಧು ದೇವಯ್ಯ, ರಾಜೇಶ್, ರಾಣಿ ನಾರಾಯಣ,ರತಿ ಅಚ್ಚಪ್ಪ, ಜೆಶ್, ಸುಜಾ ಪೂಣಚ್ಚ, ಆರ್.ಎಂ.ಸಿ.ಸದಸ್ಯ ಮೋಹನ್ ರಾಜ್ ಮುಂತಾದವರು ಹಾಜರಿದ್ದರು.