ಮಡಿಕೇರಿ, ಆ. 31: ವಿದ್ಯೆಯೊಂದಿಗೆ ದೇಶಪ್ರೇಮವನ್ನೂ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿ ಗಳಿಗೆ ಮಂಗಳೂರು ಶ್ರೀ ನಾರಾಯಣ ಗುರು ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ, ವಾಗ್ಮಿ ಬಿ. ಕೇಶವ ಬಂಗೇರ ಕರೆ ನೀಡಿದರು.ಮಂಗಳೂರು ವಿಶ್ವವಿದ್ಯಾನಿಲಯ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಇಂದು ಆಯೋಜಿಸಲಾಗಿದ್ದ ತಿರಂಗ ಜಾಗೃತ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಭಾರತದ ಮಣ್ಣನ್ನು ತಾಯಿಗೆ ಹೋಲಿಸಲಾಗುತ್ತದೆ. ಅಂತಹ ತಾಯಿಯ ಅಸ್ತಿತ್ವಕ್ಕೆ ಧಕ್ಕೆ ಬಂದರೆ ಪ್ರತಿಯೊಬ್ಬ ಭಾರತೀಯನ್ಯೂ ಸ್ವಾರ್ಥ ಬದಿಗಿಟ್ಟು, ದೇಶದ ಪರ ಧನಿ ಎತ್ತಬೇಕು. ಹಾಗಾದಾಗ ಮಾತ್ರ ಈ ಮಣ್ಣಿನಲ್ಲಿ ನಮ್ಮೆಲ್ಲರ ಜನ್ಮ ಸಾರ್ಥಕವಾದಂತಾಗುತ್ತದೆ. ಈ ದೇಶದ ಸೇನಾ ಪರಂಪರೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕೊಡಗು ಪುಣ್ಯಭೂಮಿ ಎಂದು ಬಣ್ಣಿಸಿದ ಕೇಶವ್ ರಾಷ್ಟ್ರಧ್ವಜದಲ್ಲಿರುವ ಕೇಸರಿ, ಬಿಳಿ, ಹಸಿರು ಬಣ್ಣಗಳು ಭಾರತದ ಸಮಗ್ರ ವಿಚಾರಧಾರೆಯನ್ನು ಒಳಗೊಂಡಿದೆ ಹೊರತಾಗಿ ಯಾವದೇ ಜಾತಿ, ಧರ್ಮವನ್ನು ಬಿಂಬಿಸುವದಿಲ್ಲ ಎಂದು ಹೇಳಿದರು.

ತಿರಂಗ ಜಾಗೃತ ಕಾರ್ಯಕ್ರಮದ ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಮಾತನಾಡಿ, ವಿದ್ಯಾರ್ಥಿಗಳು ವಿವಿಧತೆಯಲ್ಲಿ ಏಕತೆ ಇರುವ ದೇಶವಾದ ಭಾರತದಲ್ಲಿ ಯೋಧರನ್ನು ಹಾಗೂ

ರಾಷ್ಟ್ರಧ್ವಜವನ್ನು ಗೌರವಿಸಬೇಕೆಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ. ಎಂ.ಕೆ. ಮಾಧವ, ಡಾ.ಕೆ.ಎಂ. ಸೌಮ್ಯ ಉಪಸ್ಥಿತರಿದ್ದರು.