ಶ್ರೀಮಂಗಲ, ನ. 3: ದಕ್ಷಿಣ ಕೊಡಗಿನ ಬಾಳೆಲೆ, ನಿಟ್ಟೂರು, ಪೊನ್ನಪ್ಪಸಂತೆ, ಕಿರುಗೂರು, ಕಾನೂರು, ಗ್ರಾ.ಪಂ ವ್ಯಾಪ್ತಿಯಲ್ಲಿ ದಿನನಿತ್ಯ ಅನಿಯಮಿತ ವಿದ್ಯುತ್ ಕಡಿತ, ನಿಗದಿಗಿಂತ ಕಡಿಮೆ ಪ್ರಮಾಣದ ವೋಲ್ಟೇಜ್, ಬಾಳೆಲೆ ವಿದ್ಯುತ್ ಉಪಕೇಂದ್ರದಲ್ಲಿ ಖಾಯಂ ಸಿಬ್ಬಂದಿ ಇಲ್ಲದಿರುವದು ಸೇರಿದಂತೆ ವಿದ್ಯುತ್ ಸಮಸ್ಯೆಯಿಂದ ಬೇಸತ್ತ ರೈತರು ಬಾಳೆಲೆ ವಿದ್ಯುತ್ ಉಪಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.

ಕೆ.ಪಿ.ಟಿ.ಸಿ.ಎಲ್ ಹಾಗೂ ಚೆಸ್ಕಾಂ ಇಲಾಖಾಧಿಕಾರಿಗಳು ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಹೊರಿಸಿ ತಮ್ಮ ಆಂತರಿಕ ಬಿನ್ನಾಭಿಪ್ರಾಯವನ್ನು ಬಹಿರಂಗ ಪಡಿಸಿಕೊಂಡರು. ತೀವ್ರ ತರಾಟೆಗೆ ಒಳಗಾದ ಅಧಿಕಾರಿಗಳನ್ನು ಕೇಂದ್ರ ಒಳಗೆ ಕೂಡಿ ಹಾಕಿ ಕೂಡಲೇ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು. ಪ್ರತಿಭಟನೆ ಸಂದರ್ಭ ಬಾಳೆಲೆ ವಿದ್ಯುತ್ ಉಪಕೇಂದ್ರ ಜೆ.ಇ. ಸೋಮೇಶ್ ಹಾಗೂ ಗೋಣಿಕೊಪ್ಪ ಪ್ರಭಾರ

ಎ.ಇ.ಇ ಹೇಮಚಂದ್ರ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೆ, ಪೊನ್ನಂಪೇಟೆಯ ವಿದ್ಯುತ್ ಸರಬರಾಜು ಕೇಂದ್ರದಿಂದಲೇ ಕೆ.ಪಿ.ಟಿ.ಸಿ.ಎಲ್ ವತಿಯಿಂದ ವಿದ್ಯುತ್ ಕಡಿತವಾಗುತ್ತಿದೆ ಎಂದು ಸಮಜಾಯಿಷಿಕೆ ನೀಡಿದರು. ಅಲ್ಲದೆ ಪೊನ್ನಂಪೇಟೆಯಿಂದಲೇ ವಿದ್ಯುತ್ ವೋಲ್ಟೇಜ್ ಕಡಿಮೆ ಪ್ರಮಾಣದಲ್ಲಿ ಬಿಡಲಾಗುತ್ತಿದೆ. ಈ ಬಗ್ಗೆ ಕೆ.ಪಿ.ಟಿ.ಸಿ.ಎಲ್ ಅಧಿಕಾರಿಗಳಿಗೆ ಎಷ್ಟೇ ಹೇಳಿದರೂ ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ತೀವ್ರ ಆಕ್ರೋಷಿತರಾದ ರೈತರು ‘ನಿಮ್ಮಿಂದ ಈ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ ಎಂದಾದರೆ ಈ ಸಮಸ್ಯೆಯನ್ನು ಪರಿಹರಿಸುವವರನ್ನು ಕರೆಸುತ್ತೇವೆ. ಅದುವರೆಗೆ ನೀವು ಹೊರಗೆ ಬರುವಂತಿಲ್ಲ. ಈ ಸಮಸ್ಯೆ ಹಲವು ಸಮಯದಿಂದ ನಿಮ್ಮ ಗಮನಕ್ಕೆ ತಂದರೂ ನೀವು ಸ್ಪಂದಿಸುತ್ತಿಲ್ಲ ನಿಮಗೆ ಪಾಠ ಕಲಿಸುತ್ತೇವೆ’ ಎಂದು ಇಬ್ಬರು ಅಧಿಕಾರಿಗಳನ್ನು ಕೇಂದ್ರದ ಒಳಗೆ ಕೂಡಿ ಹಾಕಿ ಬೀಗ ಜಡಿದರು. ಸುಮಾರು 10 ಗಂಟೆಯಿಂದ ಕೆ.ಪಿ.ಟಿ.ಸಿ.ಎಲ್. ಪ್ರಭಾರ ಎ.ಇ.ಇ ಗುರುಪ್ರಸಾದ್ ಅವರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವಂತೆ ರೈತರು ಆಗ್ರಹಿಸಿದರು. ಮಧ್ಯಾಹ್ನ ಒಂದೂವರೆ ಗಂಟೆಗೆ ಆಗಮಿಸಿದ ಗುರುಪ್ರಸಾದ್ ಅವರನ್ನು ತೀವ್ರವಾಗಿ ರೈತರು ತರಾಟೆಗೆ ತೆಗೆದುಕೊಂಡು ತಡವಾಗಿ ಬಂದಿದ್ದಕ್ಕೆ ಆಕ್ರೋಶ ವ್ಯಕ್ತ ಪಡಿಸಿದರು.

ಚೆಸ್ಕಾಂ ಅಧಿಕಾರಿಗಳಾದ ಸೋಮೇಶ್, ಹೇಮಚಂದ್ರ ಅವರು ವಿದ್ಯುತ್ ಸಮಸ್ಯೆ ಇರುವ ಬಗ್ಗೆ ಯಾವದೇ ಲಿಖಿತ ಮನವಿ ನೀಡಿಲ್ಲ. ಈಗಷ್ಟೆ ವಿದ್ಯುತ್ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ಬಂದಿದೆ ಎಂದು ಹೇಳಿದರು. ಅಲ್ಲದೆ ತಾವು ತಡವಾಗಿ ಬರಲು ಎ.ಇ.ಇ ಅವರ ಅನುಮತಿ ಹಾಗೂ ಅವರಿಂದ ಈ ಬಗ್ಗೆ ಮಾಹಿತಿ ಪಡೆದು ಬರಬೇಕಾಯಿತು. ಎಂದು ಹೇಳಿದರು. ಹಾಗಾದರೆ ನಿಮ್ಮ ಎ.ಇ.ಇ ಬರಲಿ ಅವರು ಬಂದು ಸಮಸ್ಯೆ ಬಗೆಹರಿಸುವವರೆಗೆ ನೀವು ಸಹ ಒಳಗೆ ಇರಿ ಎಂದು ಒಳಗೆ ಕೂಡಿ ಹಾಕಿ ಬೀಗ ಜಡಿದರು.

ತಪ್ಪೊಪ್ಪಿಗೆ ನಂತರ ಬಿಡುಗಡೆ: ಪ್ರತಿಭಟನಾಕಾರರ ಆಕ್ರೋಶಕ್ಕೆ ತುತ್ತಾದ ಅಧಿಕಾರಿಗಳು ಈವರೆಗೆ ಮಾಡಿರುವ ತಪ್ಪನ್ನು ಸಾರ್ವಜನಿಕವಾಗಿ ಒಪ್ಪಿಕೊಂಡು ಇನ್ನು ಮುಂದೆ ಸರಕಾರದ ನಿಯಮ ಮೀರಿ ವಿದ್ಯುತ್ ಕಡಿತ ಮಾಡುವದಿಲ್ಲ. ಈಗ ಎದುರಾಗಿರುವ ಸಮಸ್ಯೆಯನ್ನು ತಕ್ಷಣದಿಂದಲೇ ಸರಿಪಡಿಸುವ ಭರವಸೆ ನೀಡಿದ ನಂತರ ದಿಗ್ಬಂಧನದಿಂದ ಬಿಡುಗಡೆ ಮಾಡಿದರು.

ರೈತರು ತೋಡಿಕೊಂಡ ಸಮಸ್ಯೆ: 250 ರಿಂದ 350 ಇರಬೇಕಾದ ವೋಲ್ಟೇಜ್, ಕೇವಲ 180 ಇರುತ್ತದೆ. ಅನಿಯಮಿತ ವಿದ್ಯುತ್ ಕಡಿತ, ಬಾಳೆಲೆ ಕೇಂದ್ರದಲ್ಲಿ ಖಾಯಂ ಸಿಬ್ಬಂದಿ ಇಲ್ಲ. ಇದರಿಂದ ತುರ್ತಾಗಿ ವಿದ್ಯುತ್ ಸಮಸ್ಯೆಗೆ ಸ್ಪಂದಿಸಲು ಸಿಬ್ಬಂದಿ ಲಭ್ಯವಾಗುತ್ತಿಲ್ಲ. ಪೊನ್ನಂಪೇಟೆ ವಿದ್ಯುತ್ ಸರಬರಾಜು ಕೇಂದ್ರದಿಂದ ವಿದ್ಯುತ್ ಲೋಡ್ ಬಿಡುತ್ತಿಲ್ಲ. ಬಾಳೆಲೆ ವ್ಯಾಪ್ತಿಗೆ ಸಂಪರ್ಕ ಒದಗಿಸುವ 11 ಕೆ.ವಿ ವಿದ್ಯುತ್ ಸಾಮಥ್ರ್ಯದ ಮಾರ್ಗದಲ್ಲಿ 8 ಕೆ.ವಿ ಮಾತ್ರ ವಿದ್ಯುತ್ ಹರಿಯುತ್ತಿದೆ. ಈ ಮಾರ್ಗದಲ್ಲಿ ಕಳಪೆ ಗುಣಮಟ್ಟದ ವಿದ್ಯುತ್ ತಂತಿ ಮತ್ತು ಉಪಕರಣ ಬಳಕೆಯಿಂದ ವಿದ್ಯುತ್ ಸೋರಿಕೆಯಾಗುತ್ತಿದೆ. ಇ.ಇ. ಸೋಮಶೇಖರ್ ಅವರು ಬಾಳೆಲೆ ವಿಭಾಗಕ್ಕೆ ಪ್ರತ್ಯೇಕ ಫೀಡರ್ ಅಳವಡಿಸುವ ಭರವಸೆ ನೀಡಿದರೂ ಈಡೇರಿಲ್ಲ.

ಬಾಳೆಲೆ ವಿದ್ಯುತ್ ಉಪಕೇಂದ್ರದ ವ್ಯಾಪ್ತಿಯ ವಿದ್ಯುತ್ ಮಾರ್ಗವನ್ನು ಕಾನೂರು ಮಾರ್ಗಕ್ಕೆ ಸಂಪರ್ಕಿಸ ಲಾಗಿದೆ. ಇದರಿಂದ ಕಾನೂರಿನ ಮಾರ್ಗದಲ್ಲಿ ಲೋಪವಾದರೂ ಪೊನ್ನಂಪೇಟೆ, ಸುಳುಗೋಡು, ಕೋಣನಕಟ್ಟೆ, ನಲ್ಲೂರು, ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತವಾಗುತ್ತದೆ.

ಬಾಳೆಲೆ ವಿದ್ಯುತ್ ಉಪಕೇಂದ್ರದ ವ್ಯಾಪ್ತಿಯಲ್ಲಿ 850 ಐ.ಪಿ ಸೆಟ್‍ಗಳಿದ್ದು, ಇದರಲ್ಲಿ ಇದೀಗ 80 ಮಾತ್ರ ಕಾರ್ಯನಿರ್ವಹಿಸುತ್ತಿದೆ. ಕಾಫಿಗೆ ನೀರು ಒದಗಿಸುವ ಸಮಯದಲ್ಲಿ ಎಲ್ಲ ಐ.ಪಿ ಸೆಟ್‍ಗಳು ಚಾಲನೆಯಾಗುತ್ತದೆ. ಆದರೆ ಈಗಲೇ ವಿದ್ಯುತ್ ಕಡಿತ ಹಾಗೂ ವಿದ್ಯುತ್ ವೋಲ್ಟೇಜ್ ಸಮಸ್ಯೆ ಎದುರಾದರೆ ಬರಗಾಲಕ್ಕೆ ತುತ್ತಾಗಿರುವ ಜನರು ತಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವದು ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಜಿ.ಪಂ ಸದಸ್ಯ ಬಾನಂಡ ಪ್ರಥ್ಯು, ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಪ್ರಮುಖರಾದ ಆದೇಂಗಡ ಅಶೋಕ್, ಮೇಚಂಡ ವಾಸು, ಮುಕ್ಕಾಟಿರ ಕಾವೇರಪ್ಪ, ಕಾಡ್ಯಮಾಡ ಕರುಂಬಯ್ಯ, ಆದೇಂಗಡ ವಿನು ಉತ್ತಪ್ಪ, ಕಾಂಡೇರ ಗಯಾ, ಪೋಡಮಾಡ ಸುಖೇಶ್, ಪಾರುವಂಗಡ ಬೋಸ್ ತಮ್ಮಯ್ಯ, ಅರಮಣಮಾಡ ರಂಜನ್ ಚಂಗಪ್ಪ, ಸತೀಶ್ ದೇವಯ್ಯ, ಕೊಕ್ಕೆಂಗಡ ರಂಜನ್, ಪೋರಂಗಡ ಪವನ್ ಚಿಟ್ಟಿಯಪ್ಪ, ಕಾಂಡೇರ ಶೇಖರ್, ಶಮಿ, ಶಶಿ, ರಮೇಶ್ ಆದೇಂಗಡ ವಿನೋದ್ ಚಂಗಪ್ಪ ಮತ್ತಿತರರು ಪಾಲ್ಗೊಂಡಿದ್ದರು.