ಕುಶಾಲನಗರ, ಡಿ. 27: ವಿದ್ಯಾರ್ಥಿಗಳಿಗೆ ಸಮಾನತೆ, ಸೌಹಾರ್ದತೆ ಹಾಗೂ ಏಕತೆ ಬಗ್ಗೆ ತಿಳಿಹೇಳುವದು ವಿದ್ಯಾಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ ಎಂದು ಮಿಳಿಂದ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಪ್ರೊ.ಹೆಚ್. ಗೋವಿಂದಯ್ಯ ತಿಳಿಸಿದ್ದಾರೆ. ಅವರು ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ನಡೆದ ನಿರ್ದೇಶಕ ಪುಟ್ಟಣ ಕಣಗಾಲ್ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಮೇಲು, ಕೀಳು ಭಾವನೆ ಸಲ್ಲದು. ರಾಗ, ದ್ವೇಷ, ಅಸೂಯೆ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದ ಅವರು, ಶಿಕ್ಷಣ ಸಂಸ್ಥೆಗಳು ಈ ನಿಟ್ಟಿನಲ್ಲಿ ಪ್ರತಿಪಾದನೆ ಮಾಡ ಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕೊಪ್ಪ ಮಿಳಿಂದ ಶಾಲಾ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಪುಟ್ಟಣ ಕಣಗಾಲ್ ಅವರ ಪುತ್ರ ಕಣಗಾಲ್ ನೃತ್ಯಾಲಯ ಟ್ರಸ್ಟ್‍ನ ನಿರ್ದೇಶಕ ರಾಮು ಕಣಗಾಲ್ ಸಾಂಸ್ಕøತಿಕ ಸೌರಭ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಯಲು ಚಿತ್ರಾಲಯದ ಮುಖ್ಯಸ್ಥ ಮೋಹನ್ ಸೋನ ಮತ್ತು ಶಾಲೆಯ ಪುಟಾಣಿ ಮಕ್ಕಳು ಚಿತ್ರ ಬಿಡಿಸುವ ಮೂಲಕ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು. ದಲಿತ ಚಳುವಳಿ ನಾಯಕ ಹರಿಹರ ಆನಂದಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಮಾತನಾಡಿ, ಶಾಲೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರಲ್ಲದೆ, ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆಯುವ ವಿದ್ಯಾರ್ಥಿನಿಗೆ ಪುಟ್ಟಣ ಕಣಗಾಲ್ ನೆನಪಿನಲ್ಲಿ 5 ಸಾವಿರ ರೂಗಳ ಪ್ರೋತ್ಸಾಹ ಬಹುಮಾನವನ್ನು ನೀಡುವದಾಗಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಪುಟ್ಟಣ ಕಣಗಾಲ್ ಅವರ ಕುಟುಂಬ ಸದಸ್ಯರು, ಮಿಳಿಂದ ವಿದ್ಯಾಸಂಸ್ಥೆಯ ಧರ್ಮದರ್ಶಿ ಅಣ್ಣಯ್ಯ, ಡಿ.ನಿಂಗರಾಜು, ಡೀಡ್ ಸಂಸ್ಥೆಯ ಮುಖ್ಯಸ್ಥ ಡಾ.ಎಸ್. ಶ್ರೀಕಾಂತ್, ಹಿರಿಯ ಪತ್ರಕರ್ತ ಕಂಪ್ಲಾಪುರ ಮೋಹನ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕÀ ಎಂ.ಎನ್.ಚಂದ್ರಮೋಹನ್, ಪಿರಿಯಾಪಟ್ಟಣ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಂ.ಶಿವಸ್ವಾಮಿ, ಉದ್ಯಮಿ ಕೋದಂಡರಾಮ್, ತಾಲೂಕು ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಶಿವಯೋಗ, ಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರೇಣುಕಾಸ್ವಾಮಿ ಮತ್ತಿತರರು ಇದ್ದರು.

ಇದೇ ಸಂದರ್ಭ ದಾನಿಗಳಾದ ಉದ್ಯಮಿ ಕೋದಂಡರಾಮ್, ಕಣಗಾಲ್ ನೃತ್ಯಾಲಯ ಟ್ರಸ್ಟ್ ನಿರ್ದೇಶಕ ರಾಮು ಕಣಗಾಲ್ ಅವರು ಗಳನ್ನು ಸನ್ಮಾನಿಸಿ ಗೌರವಿಸಲಾಯಿತು.