ಮಡಿಕೇರಿ, ನ. 21 : ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕೊಡಗು ಜಿಲ್ಲೆಗೆ ವಾಯು ಗುಣಮಟ್ಟ ಪರಿಶೀಲನೆ ಮತ್ತು ನಿರ್ವಹಣಾ ಕೇಂದ್ರ ಮಂಜೂರಾಗಿದ್ದು, ಸಧ್ಯದಲ್ಲಿಯೇ ಕಾರ್ಯಾರಂಭ ಮಾಡಲಿದೆ ಎಂದು ಮಂಡಳಿಯ ಸದಸ್ಯ ಕಾವೇರಿಯಪ್ಪ ತಿಳಿಸಿದ್ದಾರೆ.

ನಗರದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆ ಹಾಗೂ ರೋಟರಿ ಕ್ಲಬ್ ವತಿಯಿಂದ ಸ್ವಚ್ಛ ಭಾರತ್ ಅಭಿಯಾನದ ಪ್ರಯುಕ್ತ ನಡೆದ ಸೈಕಲ್ ಜಾಥಾದ ಉದ್ಘಾಟನಾ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹಸಿರು ಪರಿಸರದ ಕೊಡಗು ಜಿಲ್ಲೆಯಲ್ಲೂ ಪರಿಸರ ಮಾಲಿನ್ಯ ವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು ನಗರದಲ್ಲಿರುವ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಶಾಖಾ ಕಚೇರಿಯನ್ನು ಸದುಪಯೋಗ ಪಡಿಸಿಕೊಂಡು ಸ್ವಚ್ಛ ಪರಿಸರ ನಿರ್ಮಾಣಕ್ಕೆ ಮುಂದಾಗು ವಂತೆ ಕರೆ ನೀಡಿದರು.

ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು ಪ್ರತಿಯೊಬ್ಬರ ಮನೆಯಿಂದಲೇ ಸ್ವಚ್ಛತಾ ಕಾರ್ಯ ಆರಂಭಗೊಂಡರೆ ಇಡೀ ಪರಿಸರ ಸ್ವಚ್ಛವಾಗಿರುತ್ತದೆ. ನಾವಿರುವ ಪರಿಸರವೆಲ್ಲವೂ ನಮ್ಮದೇ ಎಂದು ಭಾವಿಸುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಾವು ಯಾಕೆ ಮಾಡಬೇಕು ಎನ್ನುವ ಅಸಡ್ಡೆಯನ್ನು ಬದಿಗೊತ್ತಿ ಶ್ರದ್ಧೆಯಿಂದ ಸಾಮಾಜಿಕ ಕಳಕಳಿಯನ್ನು ಮೆರೆಯಬೇಕು ಎಂದರು.

ಶ್ರೀ ರಾಜೇಶ್ವರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ. ಹೆಚ್.ಎಸ್. ವಾಸುದೇವ್, ನಿರ್ದೇಶಕ ಹೆಚ್.ಎಸ್. ದೇವರಾಜು, ಶ್ರೀ ರಾಜರಾಜೇಶ್ವರಿ ದೇವಾಲಯದ ಧರ್ಮದರ್ಶಿ ಗೋವಿಂದ ಸ್ವಾಮಿ, ನಗರಸಭಾ ಪೌರಾಯುಕೆÀ್ತ ಶುಭ, ರೋಟರಿ ಕ್ಲಬ್ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ, ನಗರಸಭಾ ಸದಸ್ಯ ಚುಮ್ಮಿ ದೇವಯ್ಯ, ಶ್ರೀ ರಾಜೇಶ್ವರಿ ವಿದ್ಯಾಸಂಸ್ಥೆಯ ವ್ಯವಸ್ಥಾಪಕಿ ಪಿ.ಎಲ್.ಚೈತ್ರ ಮತ್ತಿತರರು ಉಪಸ್ಥಿತರಿದ್ದರು.

ಸುಮಾರು 50 ಕ್ಕೂ ಅಧಿಕ ವಿದ್ಯಾರ್ಥಿಗಳು ಸೈಕಲ್ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸಿದರು. ಮಹದೇವಪೇಟೆ, ಭಗವತಿ ನಗರ, ಕಾನ್ವೆಂಟ್ ಜಂಕ್ಷನ್, ಕಾವೇರಿ ಹಾಲ್, ರೇಸ್ ಕೋರ್ಸ್ ರಸ್ತೆ ಸೇರಿದಂತೆ ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ವಿದ್ಯಾಸಂಸ್ಥೆಯ ಆವರಣದಲ್ಲಿ ಜಾಥಾ ಸಮಾರೋಪಗೊಂಡಿತು.