ಸೋಮವಾರಪೇಟೆ, ನ. 8: ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆಯಾದ ಅಂತರ್ಜಾಲವನ್ನು ಸದ್ವಿನಿಯೋಗ ಮಾಡಿಕೊಂಡರೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್ ಹೇಳಿದರು.ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಇಲ್ಲಿನ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ವಿವಿಧ ಶಾಲೆಯ ಮಕ್ಕಳಿಗೆ ಆಯೋಜಿಸಲಾಗಿದ್ದ ‘ವಿದ್ಯಾರ್ಥಿ ಅಂತರ್ಜಾಲ ಪ್ರಪಂಚ’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಅಂತರ್ಜಾಲದ ಪೂರ್ಣ ಮಾಹಿತಿಯು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಹೆಚ್ಚಿನ ಸಹಕಾರಿ ಯಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಪ್ರತಿಯೋರ್ವ ವಿದ್ಯಾರ್ಥಿಯು ಕಂಪ್ಯೂಟರ್ ಜ್ಞಾನದೊಂದಿಗೆ ಅಂತರ್ಜಾಲ ಬಳಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಹೇಳಿದರು.
ವೇದಿಕೆಯಲ್ಲಿ ಹಾನಗಲ್ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ದೀಪಕ್, ಬೇಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಯೋಗೇಂದ್ರ, ಸಂತ ಜೋಸೆಫ್ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರಾಯಪ್ಪ, ಶಿಕ್ಷಣ ಸಂಯೋಜಕ ರಾಮಚಂದ್ರ ಮೂರ್ತಿ, ಸಿಆರ್‍ಪಿ ಲಕ್ಷ್ಮೀ, ಸಂತ ಜೋಸೆಫ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹ್ಯಾರಿ ಮೋರಸ್ ಉಪಸ್ಥಿತರಿದ್ದರು.