ಕೂಡಿಗೆ, ಜೂ. 6: ಕೂಡಿಗೆಯ ಕೃಷಿ ಇಲಾಖೆಯ ಆವರಣದಲ್ಲಿರುವ ರೇಷ್ಮೆ ಕೃಷಿ ಕ್ಷೇತ್ರದಲ್ಲಿರುವ ಮೊರಾರ್ಜಿ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿ ಗಳಿಗೆ ಸ್ವಾಗತ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ಮಂತ್ರಿಮಂಡಲ ರಚನೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಶಾಲೆಯ ಪ್ರಾಂಶುಪಾಲ ಕೆ. ಪ್ರಕಾಶ್ ಉದ್ಘಾಟಿಸಿ, ಮಾತನಾಡುತ್ತಾ ವಿದ್ಯಾರ್ಥಿಗಳು ಸಿಗುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ಶಿಸ್ತು, ಏಕಾಗ್ರತೆ ಅಗತ್ಯವಾಗಿದ್ದು ವಿದ್ಯಾರ್ಥಿ ದೆಸೆಯಿಂದಲೇ ಇವುಗಳನ್ನು ರೂಡಿಸಿಕೊಳ್ಳಬೇಕು. ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದರೆ ಉತ್ತಮ ಫಲ ದೊರೆಯುತ್ತದೆ. ವಸತಿ ಶಾಲೆಗಳನ್ನು ಸ್ವಚ್ಛವಾಗಿಟ್ಟುಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಓದಿನೆಡೆಗೆ ಆಸಕ್ತಿ ತೋರಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 6ನೇ ತರಗತಿ ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಿ, ಪೆನ್ನುಗಳನ್ನು ವಿತರಿಸಿದರು.

ನಂತರ ವಿದ್ಯಾರ್ಥಿ ಮಂಡಲದ ಮುಖ್ಯಮಂತ್ರಿಯಾಗಿ ಉಮೇಶ್, ಉಪ ಮುಖ್ಯಮಂತ್ರಿಯಾಗಿ ಎಂ.ಜಿ. ಆಶಿಕಾ, ಗೃಹ ಮಂತ್ರಿಯಾಗಿ ಕೆ.ಕೆ. ಆಕಾಶ ಹಾಗೂ ಇತರ ಮಂತ್ರಿ ಮಂಡಲ ರಚನೆ ಮಾಡಲಾಯಿತು.

ಈ ಸಂದರ್ಭ ದೈಹಿಕ ಶಿಕ್ಷಕ ದೊಡ್ಡಯ್ಯ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಭೋದಿಸಿದರು.

ಶಾಲಾ ಶಿಕ್ಷಕ ಸಂತೋಷ್, ಮಂಜು, ಆಸಿಫ್, ಹೆಚ್.ಬಿ. ದಿನೇಶಾಚಾರಿ, ನಾಗೇಂದ್ರ, ಶಿಲ್ಪಶ್ರೀ, ಭವ್ಯ, ದರ್ಶಿನಿ, ಕವಿತ ಹಾಗೂ ವಿದ್ಯಾರ್ಥಿಗಳು ಇದ್ದರು.