ಕುಶಾಲನಗರ, ನ. 29: ಅತ್ತೂರು ಜ್ಞಾನಗಂಗಾ ವಸತಿ ಶಾಲೆಯ 15ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಡಿಸೆಂಬರ್ 19 ರಿಂದ 3 ದಿನಗಳ ಕಾಲ ಕಾಲೇಜಿನಲ್ಲಿ ಅಂತರ್ ಜಿಲ್ಲಾ ಕ್ರೀಡಾಕೂಟ, ವಿಜ್ಞಾನ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ ಎಂದು ಜ್ಞಾನಗಂಗಾ ಎಜ್ಯುಕೇಷನ್ ಟ್ರಸ್ಟ್‍ನ ನಿರ್ದೇಶಕರಾದ ಪುಲಿಯಂಡ ರಾಮ್ ದೇವಯ್ಯ ತಿಳಿಸಿದ್ದಾರೆ.ವಿದ್ಯಾಸಂಸ್ಥೆಯಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾಹಿತಿ ನೀಡಿದ ರಾಮ್ ದೇವಯ್ಯ, 2002ರಲ್ಲಿ ಪ್ರಾರಂಭಗೊಂಡ ಸಂಸ್ಥೆ ಪ್ರಸಕ್ತ ಎಲ್‍ಕೆಜಿ ಯಿಂದ 10ನೇ ತರಗತಿವರೆಗೆ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಪ್ರಯತ್ನ ಮಾಡುತ್ತಿದೆ ಎಂದಿದ್ದಾರೆ. ಶಾಲೆಯಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಜಿಲ್ಲೆಯ ಗ್ರಾಮೀಣ ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 15ನೇ ವರ್ಷದ ಅಂಗವಾಗಿ ಡಿಸೆಂಬರ್ 19 ರಂದು ಅಂತರ್ ಜಿಲ್ಲಾ ವಾಲಿಬಾಲ್ ಮತ್ತು ಕಬಡ್ಡಿ ಸ್ಪರ್ಧೆ, ವಿದ್ಯಾರ್ಥಿಗಳಿಗೆ ಷಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಜ್ಞಾನ ವಸ್ತುಪ್ರದರ್ಶನ ಕೂಡ ಆಯೋಜಿಸಿದ್ದು ಇದರಲ್ಲಿ 50 ಕ್ಕೂ ಹೆಚ್ಚಿನ ಶಾಲೆಗಳು ಪಾಲ್ಗೊಳ್ಳಲಿವೆ ಎಂದು ಮಾಹಿತಿ ನೀಡಿದ್ದಾರೆ.

16 ವರ್ಷದ ಒಳಗಿನ ವಿದ್ಯಾರ್ಥಿಗಳು ಡಿಸೆಂಬರ್ 10ರ ಒಳಗೆ ತಂಡವನ್ನು ನೋಂದಾಯಿಸಿ ಕೊಳ್ಳಬೇಕು. ವಿಜೇತ ತಂಡಗಳಿಗೆ ರೂ. 15 ಸಾವಿರ, 10 ಸಾವಿರ ಮತ್ತು ತೃತೀಯ ಬಹುಮಾನವಾಗಿ 7.500 ನಗದು ಬಹುಮಾನದೊಂದಿಗೆ ಪ್ರಶಸ್ತಿಪತ್ರ ನೀಡಲಾಗುವದು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9880382259, 8762817896 ಸಂಪರ್ಕಿಸುವಂತೆ ಕೋರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಟಿ.ಎಂ. ಶರೀನ್, ಉಪ ಪ್ರಾಂಶುಪಾಲರಾದ ಬಿ.ಕೆ. ನಾಗರಾಜ್, ದೈಹಿಕ ಶಿಕ್ಷಕರಾದ ಸತೀಶ್, ಯೋಗೇಶ್ ಇದ್ದರು.