ಚೆಟ್ಟಳ್ಳಿ, ಜೂ. 18: ಇತ್ತೀಚೆಗೆ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ಕಾಫಿ ಕಾಯಿ ಕೊರಕದ ಹಾವಳಿ ಮತ್ತು ಬಿಳಿ ತಿಗಣೆ ಹಾವಳಿಯಿಂದ ಕಾಫಿ ಗಿಡಗಳಿಗೆ ಆಗುವ ಅನಾಹುತದÀ ಬಗ್ಗೆ ವಿಚಾರ ವಿನಿಮಯ ಸಂಕಿರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಕೊಡಗು ಜಿಲ್ಲೆಯ ಬಹಳಷ್ಟು ಬೆಳೆಗಾರರು ಭಾಗವಹಿಸಿದ್ದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಾಫಿ ಮಂಡಳಿಯ ಮಾಜಿ ಉಪಾಧÀ್ಯಕ್ಷ ಹಾಗೂ ಪ್ರಸ್ತುತ ಕಾಫಿ ಮಂಡಳಿಯ 6ನೇ ಸಂಶೋಧನಾ ಸಲಹಾ ಸಮಿತಿಯ ಸದಸ್ಯರಾಗಿರುವ ಬೋಸ್ ಮಂದಣ್ಣ ಆಗಮಿಸಿದ್ದರು. ಸಂಸ್ಥೆಯ ಸಂಶೋಧನಾ ಉಪನಿರ್ದೇಶಕ ಡಾ. ಜಿ.ಎಫ್ ಡಿಸೋಜ ಈ ಕಾರ್ಯಕ್ರಮದ ವಿಶೇಷತೆಯ ಬಗ್ಗೆ ವಿವರಿಸಿದರು ಮತ್ತು ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿ, ಕಾಯಿ ಕೊರಕದ ಹಾವಳಿ ಮತ್ತು ಬಿಳಿ ತಿಗಣೆ ಹಾವಳಿಯ ಬಗ್ಗೆ ಬೆಳೆಗಾರರು ಈ ಕಾರ್ಯಾಗಾರದಲ್ಲಿ ಮಾಹಿತಿಯನ್ನು ಪಡೆದು, ತಮ್ಮ ಕಾಫಿ ಗಿಡಗಳನ್ನು ಸುಸ್ಥಿತಿಯಲ್ಲಿಡಬೇಕೆಂದು ತಿಳಿಸಿದರು.
ಬೋಸ್ ಮಂದಣ್ಣನವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿ, ಹವಾಮಾನ ವೈಪರೀತ್ಯದಿಂದ ಕೀಟ ಬಾಧೆ ಕಾಫಿ ಗಿಡಗಳಲ್ಲಿ ಜಾಸ್ತಿಯಾಗಿರುವದರಿಂದ ಇವತ್ತಿನ ಕಾರ್ಯಾಗಾರÀದಲ್ಲಿ ಸಂಪೂರ್ಣ ಮಾಹಿತಿಯನ್ನು ಪಡೆದು, ತಮ್ಮ ಕಾಫಿ ತೋಟಗಳನ್ನು ಸುಸ್ಥಿತಿಯಲ್ಲಿ ಇಡಬೇಕೆಂದು ಬೆಳೆಗಾರರಲ್ಲಿ ವಿನಂತಿ ಮಾಡಿಕೊಂಡರು.
ಕಾಫಿ ಮಂಡಳಿಯ ಉಪ ಸಂಶೋಧನಾ ಕೇಂದ್ರದ ಕೀಟ ಶಾಸ್ತ್ರಜ್ಞ ಡಾ. ಪಿ. ಕೊರಿಯನ್ ರಾಫಲ್ ಅವರು ದೃಶ್ಯ ಮಾಧ್ಯಮದ ಮುಖಾಂತರ ಕಾಯಿ ಕೊರಕದ ಹಾವಳಿಯನ್ನು ನಿಯಂತ್ರಿಸುವ ಬಗ್ಗೆ ಕೂಲಂಕುಶವಾಗಿ ಮಾಹಿತಿಯನ್ನು ನೀಡಿದರು. ಈಗಾಗಲೇ ಕಾಯಿ ಕೊರಕದ ಬಾಧೆ, ಅಲ್ಲಲ್ಲಿ ಕಾಫಿ ತೋಟಗಳಲ್ಲಿ ಕಂಡು ಬಂದಿದ್ದು, ಈ ಕೆಳಗಿನಂತೆ ಹತೋಟಿ ಕ್ರಮಗಳನ್ನು ಕೈಗೊಳ್ಳಬೇಕಾಗಿ ವಿನಂತಿಸಿದರು.
ಹದವಾದ ನೆರಳನ್ನು ಕಾಫಿ ತೋಟಗಳಲ್ಲಿ ಕಾಪಾಡಿಕೊಳ್ಳಬೇಕು, ಕಾಫಿ ಗಿಡಗಳನ್ನು ಸೂಕ್ತ ಸಮಯದಲ್ಲಿ ಅಂದರೆ ಮಳೆಗಾಲದ ಮೊದಲು ಕಸಿಯನ್ನು ಮಾಡಬೇಕು, ಕಾಫಿ ಕೊಯ್ಲು ಮಾಡುವಾಗ ಸಂಪೂರ್ಣವಾಗಿ ಕೊಯ್ಲು ಮಾಡಬೇಕು ಹಾಗೂ ಬಿದ್ದ ಹಣ್ಣುಗಳನ್ನು ಎರಕಬೇಕು, ತೋಟಗಳಲ್ಲಿ ಮರ ಕಾಫಿಗಳಿದ್ದರೆ, ಫಸಲನ್ನು ಬಿಡದೆ, ಸಂಪೂರ್ಣವಾಗಿ ಕೊಯ್ಲು ಮಾಡಬೇಕು, ಕಾಯಿ ಕೊರಕ ಕಂಡುಬಂದಲ್ಲಿ ಅಂತಹ ಹಣ್ಣುಗಳನ್ನು ಕಣದಲ್ಲಿ ರಾಶಿಮಾಡಿ, ತರಕಾರಿ ಎಣ್ಣೆ ಹಚ್ಚಿದ ತಾಟನ್ನು ಮುಚ್ಚಿ ಒಂದು ಗಂಟೆಕಾಲ ಇಡಬೇಕು, ಆವಾಗ ಹಣ್ಣುಗಳ ರಾಶಿ ಬಿಸಿಯಾದಾಗ ಹುಳಗಳು ಹೊರಗೆ ಬಂದು ಎಣ್ಣೆ ತಾಟಿಗೆ ತಗಲಿ ಸಾಯುತ್ತವೆ, ಕಾಫಿಯನ್ನು ಸೂಕ್ತ ರೀತಿಯಲಿ,್ಲ ಅಂದರೆ ತೇವಾಂಶ ಶೇ. 11% ರಷ್ಟು ಇರುವಂತೆ ಒಣಗಿಸುವದರಿಂದ ಎಲ್ಲಾ ಹಂತದ ಹುಳಗಳು ಸಾಯುತ್ತವೆ, ಕಾಫಿ ಬೀಜಗಳನ್ನು ತುಂಬಲು ಉಪಯೋಗಿಸುವ ಗೋಣಿ ಚೀಲಗಳು ಸ್ವಚ್ಛವಾಗಿದ್ದು, ಹುಳು ರಹಿತವಾಗಿರ ಬೇಕು, ಕಾಫಿ ತೋಟಗಳಲ್ಲಿ ಏಕರೆಗೆ 10 ರಷ್ಟು ಬ್ರೋಕೋ ಟ್ರಾಪ್‍ಗಳನ್ನು ಅಳವಡಿಸಿ, ಅಳಿದುಳಿದ ಹುಳಗಳನ್ನು ಸಂಗ್ರಹಿಸಿ ನಾಶ ಮಾಡಬೇಕು, ಕಾಫಿ ಒಣಗಿಸುವ ಕಣದ ಸುತ್ತಲೂ ಅಲ್ಲಲ್ಲಿ ಬ್ರೋಕೋ ಟ್ರಾಪ್‍ಗಳನ್ನು ಇಡುವದರಿಂದ ಬೀಜದಿಂದ ಹಾರುವ ಹುಳಗಳನ್ನು ಸಂಗ್ರಹಿಸಿ ನಾಶ ಮಾಡಬಹುದು, ಕಾಫಿ ಗಿಡಗಳಲ್ಲಿ ಹೂ ಬಿಟ್ಟ ಮೇಲೆ 120 ರಿಂದ 140 ದಿವಸದ ಸಮಯದಲ್ಲಿ ಕಾಯಿಯ ತುದಿಯಲ್ಲಿ ಹುಳಗಳು ಕಂಡು ಬಂದರೆ, 200 ಲೀಟರ್ ನೀರಿಗೆ 600 ಮಿ.ಲೀ. ಕ್ಲೋರೋ ಪೈರಿಪಸ್ 20 ಇಸಿ ಮತ್ತು 200 ಮಿ.ಲೀ. ಅಂಟು ದ್ರಾವಣ ಮಿಶ್ರಣಮಾಡಿ ಕಾಯಿಗಳ ಮೇಲೆ ಸಿಂಪಡಣೆ ಮಾಡಬೇಕು.
ಈ ವಿಧಾನಗಳನ್ನು ಅನುಸರಿಸಿದಲ್ಲಿ ಕಾಯಿ ಕೊರಕದ ಬಾಧೆಯನ್ನು ಹತೋಟಿಯಲ್ಲಿ ಇಡಬಹುದು.
ಮೇ ಅಥವಾ ಜೂನ್ ತಿಂಗಳ ಮೊದಲ ಭಾಗದಲ್ಲಿ ಕಾಫಿ ಗಿಡದ ಕಾಯಿ ಗೊಂಚಲುಗಳಲ್ಲಿ ಬಿಳಿ ತಿಗಣೆ ಕಂಡು ಬಂದಲ್ಲಿ 200 ಲೀಟರ್ ನೀರಿಗೆ, 4 ಲೀಟರ್ ಸೀಮೆಎಣ್ಣೆ ಮತ್ತು 400 ಮಿ.ಲೀ. ಅಂಟು ದ್ರಾÀ್ರವಣವನ್ನು ಚೆನ್ನಾಗಿ ಮಿಶ್ರಣ ಮಾಡಿ ಸಿಂಪಡಣೆ ಮಾಡಿದಲ್ಲಿ ಕೀಟ ಬಾಧೆಯನ್ನು ಹತೋಟಿಯಲ್ಲಿಡಬಹುದು. ಅಲ್ಲದೆ ತೋಟಗಳಲ್ಲಿ ಕಂಡು ಬರುವ ಕೆಂಪು ಇರುವೆಗಳು ಮತ್ತು ಕಪ್ಪು ಇರುವೆಗಳ ಗೂಡುಗಳನ್ನು ನಾಶ ಮಾಡಬೇಕು, ಕಾಫಿ ಗಿಡಗಳಲ್ಲಿ ಮತ್ತು ನೆರಳಿನ ಮರದ ಬುಡಗಳಲ್ಲಿ ಈ ಇರುವೆಗಳು ಕಂಡು ಬಂದಲ್ಲಿ ಮೆಲಾಥಿಯನ್ ಕೀಟ ನಾಶಕವನ್ನು ಉದುರಿಸಿ ನಾಶ ಮಾಡಿದಲ್ಲಿ, ಬಿಳಿ ತಿಗಣೆಗಳ ಸಂಖ್ಯೆ ಕಡಿಮೆ ಮಾಡಬಹುದು, ಕಾಫಿ ಗಿಡದ ಬೇರುಗಳಲ್ಲಿ ಬಿಳಿ ತಿಗಣೆಗಳ ಕಾಟ ಕಂಡುಬಂದಲ್ಲಿ ಡೈಮಿಥಿಯೇಟ್ 30ಇಸಿ 660 ಮಿ.ಲೀ. ಮತ್ತು 160 ಗ್ರಾಂ ಬೆಲೆಟಾನನ್ನು 200 ಲೀಟರ್‍ನಲ್ಲಿ ಮಿಶ್ರಣ ಮಾಡಿ ಗಿಡಗಳ ಬುಡಕ್ಕೆ ಹಾಕುವದರಿಂದ ಬಿಳಿ ತಿಗಣೆಯನ್ನು ನಿಯಂತ್ರಿಸಬಹುದು.
ಈ ವಿಧಾನಗಳನ್ನು ಅನುಸರಿಸಿ ಎರಡು ಕೀಟಗಳ ಬಾಧೆಯನ್ನು ನಿಯಂತ್ರಣ ಮಾಡಿ ಒಳ್ಳೆಯ ಗುಣಮಟ್ಟದ ಇಳುವರಿಯನ್ನು ಪಡೆಯಬಹುದೆಂದು ಡಾ.ಪಿ. ಕೊರಿಯನ್ ರಾಫೆಲ್ ಅವರು ಒತ್ತಿ ಹೇಳಿದರು. ಈ ಕಾರ್ಯಾಗಾರಕ್ಕೆ ಕೊಡಗು ಜಿಲ್ಲಾ ಕಾಫಿ ಮಂಡಳಿಯ ಎಲ್ಲಾ ವಿಸ್ತೀರ್ಣ ಅಧಿಕಾರಿಗಳು ಕೂಡ ಭಾಗವಹಿಸಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.
ಬೇಸಾಯ ತಜ್ಞ ಗೋವಿಂದಪ್ಪನವರು ಎಲ್ಲರಿಗೂ ಸ್ವಾಗತವನ್ನು ಕಿರಿಯ ಕೀಟ ಶಾಸ್ತ್ರಜ್ಞ ಬಿ.ವಿ. ರಂಜಿತ್‍ಕುಮಾರ್ ಅವರು ವಂದಿಸಿದರು.
-ಪುತ್ತರಿರ ಕರುಣ್ ಕಾಳಯ್ಯ