ಮಡಿಕೇರಿ, ಜ.22: ವಿವಿಧ ಅಭಿವೃದ್ಧಿ ಇಲಾಖೆಗಳಲ್ಲಿ ವಿಕಲ ಚೇತನರಿಗೆ ಮೀಸಲಿಟ್ಟಿರುವ ಶೇ.3 ರಷ್ಟು ಅನುದಾನವನ್ನು ತ್ವರಿತವಾಗಿ ವಿನಿಯೋಗ ಮಾಡುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿ ಗಳಿಗೆ ವಿಕಲಚೇತರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಆಯುಕ್ತ ಗೋವಿಂದರಾಜು ಅವರು ನಿರ್ದೇಶನ ನೀಡಿದ್ದಾರೆ. ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ವಿಕಲಚೇತನರಿಗೆ ನಿಗದಿಪಡಿಸಿರುವ ಅನುದಾನ ಬಳಕೆ ಸಂಬಂಧ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 7 ಸಾವಿರ ಮಂದಿ ವಿಕಲಚೇತನರು ಇದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಾರ್ವಜನಿಕ ಶಿಕ್ಷಣ, ಸರ್ವ ಶಿಕ್ಷಣ, ಐಟಿಡಿಪಿ, ಕೃಷಿ ಮತ್ತು ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ, ಸಹಕಾರ, ಕ್ರೀಡೆ ಹೀಗೆ ನಾನಾ ಇಲಾಖೆಗಳಲ್ಲಿ ವಿಕಲಚೇತನ ರಿಗಾಗಿ ಶೇ.3ರಷ್ಟು ಅನುದಾನ ಮೀಸಲಿಟ್ಟು ಕಾರ್ಯಕ್ರಮ ತಲುಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇಲಾಖಾವಾರು ಬಜೆಟ್ ನಿಗದಿಪಡಿಸಿಕೊಂಡು ಶೇ.3ರಷ್ಟು ಅನುದಾನವನ್ನು ಕಡ್ಡಾಯವಾಗಿ ವಿಕಲಚೇತನರಿಗೆ ತಲುಪಿಸಬೇಕು. ವಿಕಲಚೇತನರಿಗೆ ಎಲ್ಲಾ ಕಚೇರಿಗಳಲ್ಲಿ ಸ್ನೇಹಯುತ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಆಯುಕ್ತರು ಸ್ಪಷ್ಟಪಡಿಸಿದರು.
ವಿಕಲಚೇತನರಿಗಾಗಿ ನಿಗದಿ ಪಡಿಸಿರುವ ಅನುದಾನವನ್ನು ಖರ್ಚು ಮಾಡದಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕಾಗುತ್ತದೆ. ಆದ್ದರಿಂದ ಪ್ರಗತಿಯ ವರದಿಯನ್ನು ಜಿ.ಪಂ.ಸಿಇಓ ಮತ್ತು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ ಕೊಡುವಂತೆ ಗೋವಿಂದರಾಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶ್ರವಣದೋಷ, ಬುದ್ಧಿಮಾಂದ್ಯ, ಅಂಗವಿಕಲತೆ ಹೀಗೆ 7 ರೀತಿಯ ವಿಕಲಚೇತನರನ್ನು ಗುರುತಿಸಲಾಗಿದ್ದು, ಇವರಿಗೆ ಸಕಾಲದಲ್ಲಿ ಪ್ರಮಾಣಪತ್ರ ನೀಡಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಲು ಅಗತ್ಯ ಸಹಕಾರ ನೀಡುವದು. ಸಾಮಾಜಿಕ ಭದ್ರತಾ ಯೋಜನೆಗಳನ್ನು ಕಲ್ಪಿಸುವದು, ತಿಂಗಳಲ್ಲಿ ಒಂದು ದಿನವಾದರೂ ವಿಶೇಷ ಶಿಬಿರಗಳನ್ನು ಏರ್ಪಡಿಸಿ ವಿಕಲಚೇತನರ ಪ್ರಮಾಣ ಪತ್ರ ನೀಡಲು ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿ ಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ವಿಕಲಚೇತನರ ದೂರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು. ಹಿರಿಯ ನಾಗರಿಕರಿಗೆ ಸರ್ಕಾರದ ಸೌಲಭ್ಯ ಗಳನ್ನು ತಲುಪಿಸುವ ನಿಟ್ಟಿನಲ್ಲಿ ಆದ್ಯತೆ ಮೇಲೆ ಕ್ರಮ ಕೈಗೊಳ್ಳಬೇಕಿದೆ ಎಂದು ಗೋವಿಂದರಾಜು ಅವರು ಸೂಚನೆ ನೀಡಿದರು.
ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಉಚಿತವಾಗಿ ಆಹಾರ ನೀಡುವಂತಾಗಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.
ಜಿ.ಪಂ. ಸಿಇಓ ಚಾರುಲತಾ ಸೋಮಲ್ ಅವರು ವಿಕಲಚೇತನರ ಸಬಲೀಕರಣಕ್ಕಾಗಿ ನಿಗದಿಪಡಿಸಿರುವ ಅನುದಾನವನ್ನು ಕೂಡಲೇ ವಿನಿಯೋಗ ಮಾಡಬೇಕು. ಪ್ರಗತಿ ಸಂಬಂಧ ಮಾಹಿತಿಯನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೌರಾಯುಕ್ತೆ ಬಿ.ಶುಭ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಒ.ಆರ್. ಶ್ರೀರಂಗಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಅಜೀಜ್, ಡಿಡಿಪಿಐ ಬಸವರಾಜ, ಪಶುಸಂಗೋಪನಾ ಇಲಾಖೆಯ ಡಿಡಿ ಡಾ.ನಾಗರಾಜು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ರಾಮಪ್ಪ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಾಯಾದೇವಿ ಗಲಗಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಡಿಡಿ ಮಮ್ತಾಜ್, ಐಟಿಡಿಪಿ ಇಲಾಖೆಯ ಅಧಿಕಾರಿ ಪ್ರಕಾಶ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀ ಬಾಯಿ, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ದರ್ಶನ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಜಗದೀಶ್, ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳಾದ ಮುತ್ತಣ್ಣ, ಆರತಿ ಸೋಮಯ್ಯ, ವಿಶ್ವನಾಥ್, ಸತೀಶ್, ರಮೇಶ್, ಅಪೂರ್ವ, ಮುರುಗೇಶ್ ಇತರರು ಹಲವು ಮಾಹಿತಿ ನೀಡಿದರು.