ಮಡಿಕೇರಿ, ಜ. 5: ವಿಕಲ ಚೇತನರ ಬಗ್ಗೆ ವಿಶೇಷ ಕಾಳಜಿ ವಹಿಸುವದರೊಂದಿಗೆ ನಿರಾಶ್ರಿತರಿಗೆ ಅಭಯ ಹಸ್ತ ಚಾಚುವಲ್ಲಿ ಪ್ರತಿಯೊಬ್ಬರೂ ಆಸಕ್ತಿ ತೋರು ವಂತಾಗಬೇಕೆಂದು ವಿಕಾಸ್ ಜನಸೇವಾ ಟ್ರಸ್ಟ್ ವಾರ್ಷಿಕೋತ್ಸವ ಪ್ರಯುಕ್ತ ವಿಕಲಚೇತನರಿಗೆ ಉಚಿತ ಊಟ ವಸತಿ ಸೌಲಭ್ಯದೊಂದಿಗೆ ಕಾನ್ವೆಂಟ್ ಜಂಕ್ಷನ್‍ನಲ್ಲಿ ಪ್ರಾರಂಭಿಸ ಲಾಗಿರುವ ವೃತ್ತಿಪರ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಪ್ರಮುಖರು ಕರೆ ನೀಡಿದರು.
ಕೇಂದ್ರವನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಕ್ತಿ ದಿನಪತ್ರಿಕೆಯ ಸಂಪಾದಕ ಬಿ.ಜಿ. ಅನಂತಶಯನ ಅವರು, ಬಡತನ ದಿಂದ ನೊಂದು - ಬೆಂದ ಮನಸ್ಸು ಗಳಿಗೆ ಆತ್ಮಸ್ಥೈರ್ಯ ತುಂಬಿ ಕೈಲಾದ ಸಹಾಯ ಮಾಡುವ ಹೃದಯ ವೈಶಾಲ್ಯತೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಬೂಟಾಟಿಕೆಯ ಬದುಕು ಮುಖ್ಯವಲ್ಲ. ಅಸಹಾಯಕರ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು. ಸ್ವಾರ್ಥ ಮರೆತು ತಮ್ಮಿಂದಾದ ಸೇವೆ ಒದಗಿಸಬೇಕು ಎಂದು ಸಲಹೆಯಿತ್ತರು.
ಸಮಾರಂಭವನ್ನು ಉದ್ಘಾಟಿಸಿದ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ನಿರ್ಗತಿಕರನ್ನು ನಿರ್ಲಕ್ಷಿಸದೆ ಅವರೂ ಕೂಡ ನಮ್ಮವರೆ ಎಂಬ ಭಾವನೆಯೊಂದಿಗೆ ನೆರವು ನೀಡುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕೆಂದು ಹೇಳಿದರು.
ನಗರಸಭಾ ಆಯುಕ್ತೆ ಶುಭಾ ಮಾತನಾಡಿ, ಪ್ರಸ್ತುತ ತಂತ್ರಜ್ಞಾನ ಭರಾಟೆಯಲ್ಲಿ ಮಾನವೀಯ ಮೌಲ್ಯಗಳು ಮೂಲೆ ಗುಂಪಾಗುತ್ತಿದೆ ಎಂದು ವಿಷಾದಿಸಿದರಲ್ಲದೇ ಮಾನವನಲ್ಲಿ ಸೇವಾ ಮನೋಭಾವ ಇರಬೇಕು ಎಂದರು. ನಗರಸಭೆ ನಗರಾಭಿವೃದ್ಧಿ ಇಲಾಖೆ ವತಿಯಿಂದ ಈಗಾಗಲೇ ವಿಕಲಚೇತನರಿಗೆ ಶೇ. 3 ರಷ್ಟು ಅನುದಾನ ನೀಡಲಾಗುತ್ತಿದ್ದು, ವಿಕಾಸ್ ಜನಸೇವಾ ಟಸ್ಟಿಗೂ ನೆರವು ನೀಡುವ ನಿಟ್ಟಿನಲ್ಲಿ ಗಮನ ಹರಿಸುವದಾಗಿ ಭರವಸೆಯಿತ್ತರು. ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಎನ್.ಎಂ. ಜಗದೀಶ್ ಮಾತನಾಡಿ, ವಿಕಾಸ್ ಜನಸೇವಾ ಟ್ರಸ್ಟ್‍ನ ಸೇವೆಗೆ ಇಲಾಖೆಯಿಂದಲೂ ಅಗತ್ಯ ಸಹಕಾರ ನೀಡುವದಾಗಿ ಆಶ್ವಾಸನೆಯಿತ್ತರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಮಮ್ತಾಜ್ ಮಾತನಾಡಿ, ವಿಕಲಚೇತ ನರು, ನಿರಾಶ್ರಿತರು ಧೃತಿಗೆಡಬಾರದು. ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕೆಂದರು.
ವೇದಿಕೆಯಲ್ಲಿ ವಿಕಾಸ್ ಜನಸೇವಾ ಟ್ರಸ್ಟ್‍ನ ಅಧ್ಯಕ್ಷ ರಮೇಶ್ ಉಪಸ್ಥಿತರಿದ್ದರು. ಮುರುಗೇಶ್ ನಿರೂಪಿಸಿ, ಪೂರ್ಣಿಮಾ ಸ್ವಾಗತಿಸಿ, ಶಿವಣ್ಣ ಪ್ರಾರ್ಥಿಸಿ, ಸತೀಶ್ ವಂದಿಸಿದರು.