ಮಡಿಕೇರಿ, ಜು. 27: ನಗರ ವ್ಯಾಪ್ತಿಯಲ್ಲಿ ಹೊರ ಜಿಲ್ಲೆಯ ವಾಹನಗಳು ತರಕಾರಿ ಮಾರಾಟ ಮಾಡುವದನ್ನು ತೀವ್ರವಾಗಿ ವಿರೋಧಿಸಿರುವ ಮಾರ್ಕೆಟ್ ಸಂತೆ ವ್ಯಾಪಾರಿಗಳ ಹಿತರಕ್ಷಣಾ ಸಮಿತಿ ವಾಹನಗಳನ್ನು ದಿನಪೂರ್ತಿ ನಿಲುಗಡೆಗೊಳಿಸಿಕೊಂಡು ತರಕಾರಿ ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡುವದನ್ನು ನಿರ್ಬಂಧಿಸಬೇಕೆಂದು ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಕಾರ್ಯದರ್ಶಿ ಎಂ.ಎ. ರಜಾಕ್ ಇತ್ತೀಚೆಗೆ ಸಾರ್ವಜನಿಕ ವಾಹನ ನಿಲುಗಡೆಯ ಸ್ಥಳಗಳಲ್ಲಿ ಹೊರ ಜಿಲ್ಲೆಯ ಗೂಡ್ಸ್ ವಾಹನಗಳನ್ನು ನಿಲ್ಲಿಸಿ ತರಕಾರಿ ಸೇರಿದಂತೆ ಇನ್ನಿತರ ವಸ್ತುಗಳನ್ನು ವ್ಯಾಪಾರ ಮಾಡಲಾಗುತ್ತಿದೆ. ಇದರಿಂದ ಸಂತೆ ಮಾರುಕಟ್ಟೆಯಲ್ಲಿ ಮತ್ತು ಮಳಿಗೆಗಳಲ್ಲಿ ಹಲವಾರು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬರುತ್ತಿರುವ ವರ್ತಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಸಂತೆ ವ್ಯಾಪಾರಿಗಳು ಮತ್ತು ನಗರಸಭೆಯಿಂದ ಮಾಸಿಕ ಬಾಡಿಗೆ ಆಧಾರದಲ್ಲಿ ಗುತ್ತಿಗೆ ಪಡೆದ ಅಂಗಡಿ ಮಳಿಗೆಗಳ ವರ್ತಕರು ಸಾಲ ಮಾಡಿ ತಮ್ಮ ವ್ಯಾಪಾರ ವಹಿವಾಟುಗಳನ್ನು ನಿಗದಿಪಡಿಸಿದ ಸಂತೆಯ ಜಾಗ ಮತ್ತು ಮಾರುಕಟ್ಟೆ ಸಂಕೀರ್ಣದಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಹೊರ ಜಿಲ್ಲೆಯ ವ್ಯಕ್ತಿಗಳು ವಾಹನÀ ಗಳನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿರುವದರಿಂದ ನಗರಸಭೆÉಯ ವಾಣಿಜ್ಯ ಸಂಕೀರ್ಣವನ್ನು ಬಾಡಿಗೆಗೆ ಪಡೆದ ಸ್ಥಳೀಯ ವರ್ತಕರು ತಿಂಗಳ ಬಾಡಿಗೆ ಪಾವತಿಸಲು ಸಾಧ್ಯವಾಗದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ರಜಾಕ್ ಆತಂಕ ವ್ಯಕ್ತಪಡಿಸಿದರು.

ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡ ಸಂತೆ ವ್ಯಾಪಾರಸ್ಥರಿಗೆ ನ್ಯಾಯ ದೊರಕಿಸಿಕೊಡಲು ನಗರಸಭೆ ತಕ್ಷಣ ಮುಂದಾಗಬೇಕೆಂದು ಒತ್ತಾಯಿಸಿರುವ ಅವರು ಹೊರ ಜಿಲ್ಲೆಯ ಮಂದಿ ವಾಹನಗಳಲ್ಲಿ ತರಕಾರಿ ವ್ಯಾಪಾರ ಮಾಡುವದನ್ನು ನಿರ್ಬಂಧಿಸಬೇಕೆಂದು ಆಗ್ರಹಿಸಿದರು.