ಕುಶಾಲನಗರ, ಮೇ 27: ಕುಶಾಲನಗರದಲ್ಲಿ ನಿರ್ಮಾಣ ಗೊಳ್ಳುತ್ತಿರುವ ವಾಲ್ಮೀಕಿ ಭವನ ಕಾಮಗಾರಿಗೆ ಹೆಚ್ಚುವರಿಯಾಗಿ ರೂ. 1 ಕೋಟಿ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಸಣ್ಣ ಕೈಗಾರಿಕಾ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದ್ದಾರೆ.

ಕುಶಾಲನಗರದ ಪದವಿ ಕಾಲೇಜು ಹಿಂಭಾಗದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ರೂ. 1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ವಾಲ್ಮೀಕಿ ಭವನಕ್ಕೆ ಭೇಟಿ ನೀಡಿದ ಸಚಿವರು ಕಾಮಗಾರಿ ಪರಿಶೀಲಿಸಿ ಮಾತನಾಡಿ, ವಾಲ್ಮೀಕಿ ಭವನ ಕಾಮಗಾರಿ ಪೂರ್ಣಗೊಳ್ಳಲು ಹಾಗೂ ಪಾರ್ಕಿಂಗ್ ವ್ಯವಸ್ಥೆಗೆ ಹೆಚ್ಚುವರಿ ಹಣ ಬಿಡುಗಡೆಗೆ ನಾಯಕ ಸಮುದಾಯದ ಮುಖಂಡರು ಬೇಡಿಕೆ ಹಿನ್ನೆಲೆಯಲ್ಲಿ ಈ ಬಗ್ಗೆ ಸಮಾಜ ಕಲ್ಯಾಣ ಸಚಿವರೊಂದಿಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದರು.

ಈ ಸಂದರ್ಭ ನಾಯಕ ಸಮುದಾಯದ ಪ್ರಮುಖರಾದ ಕೆ.ಎನ್. ಅಶೋಕ್, ವೈ.ಟಿ. ಪರಮೇಶ್, ಕಾಂಗ್ರೆಸ್ ಜಿಲ್ಲಾ ವಕ್ತಾರ ಕೆ.ಕೆ. ಮಂಜುನಾಥ್ ಕುಮಾರ್, ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯ ಹೆಚ್.ಜೆ. ಕರಿಯಪ್ಪ ಮೊದಲಾದವರಿದ್ದರು.

ಬಳಿಕ ಕೂಡ್ಲೂರು ಕೈಗಾರಿಕಾ ಪ್ರದೇಶಕ್ಕೆ ತೆರಳಿದ ಸಚಿವರು ಅಲ್ಲಿನ ರಸ್ತೆಗಳ ದುಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದರು. ಬ್ಲಾನ್ ಕಾಫಿ ಸಂಸ್ಥೆಗೆ ಭೇಟಿ ನೀಡಿ ಸ್ಥಳದಲ್ಲಿದ್ದ ಅಧಿಕಾರಿಗಳ ಹಾಗೂ ಕಾಫಿ ಸಂಸ್ಕರಣಾ ಘಟಕಗಳ ಪ್ರಮುಖರೊಂದಿಗೆ ಮಾಹಿತಿ ಪಡೆದುಕೊಂಡರು.

ಈ ಸಂದರ್ಭ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಸಿ. ಬಸವರಾಜು, ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಎ.ಎನ್. ಪ್ರವೀಣ್, ನಿರ್ದೇಶಕ ಕೆ. ವರದ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಚೌಡಯ್ಯ, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ರಂಗನಾಥ್ ಇದ್ದರು.