*ಸಿದ್ದಾಪುರ, ಅ. 5: ವಾಲ್ನೂರು-ತ್ಯಾಗತ್ತ್ತೂರು ಗ್ರಾಮ ಪಂಚಾಯಿತಿ ಗ್ರಾಮಸಭೆ ನಾಗರತ್ನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ‘ವಸತಿ ಸೌಕರ್ಯ’ದ ವಿಷಯದ ಕುರಿತು ಗಂಭೀರ ಚರ್ಚೆ ನಡೆಯಿತು.

ಸರಕಾರದಿಂದ ವಸತಿಹೀನ ಗಿರಿಜನರಿಗೆ ವಸತಿ ಸೌಕರ್ಯ ಕಲ್ಪಿಸುವಂತೆ ಆದೇಶ ಬಂದ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸಿ ಸೌಕರ್ಯ ಕಲ್ಪಿಸುವಂತೆ ಆದೇಶದ ಪ್ರತಿಯನ್ನು ಒದುತ್ತಿದ್ದಂತೆ ಸದಸ್ಯ ಭುವನೇಂದ್ರ ಆಕ್ಷೇಪಣೆ ಮಾಡಿದರು. ಗಿರಿಜನ ಹಾಡಿಯಲ್ಲಿನ ಬಹುತೇಕ ಮಂದಿ ಹಣದ ಆಸೆಗೆ ಇತರ ಮತಕ್ಕೆ ಮತಾಂತರವಾಗುತ್ತಿದ್ದಾರೆ. ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಈ ಮಂದಿ ಸರಕಾರದ ಸವಲತ್ತುಗಳನ್ನು ಪಡೆದುಕೊಂಡು ಮತಾಂತರ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಇಂತಹವರಿಗೆ ಸರಕಾರದ ಸವಲತ್ತು ನೀಡಲು ಆಕ್ಷೇಪಣೆಯಿದೆ ಎಂದು ಹೇಳಿದರು. ಮತ್ತೋರ್ವ ಸದಸ್ಯ ಅಂಚೆಮನೆ ಸುಧಿ ಇದಕ್ಕೆ ಬೆಂಬಲ ವ್ಯಕ್ತಪಡಿಸಿ ಬಹುತೇಕ ಮಂದಿಯ ಹೆಸರಿನಲ್ಲಿ ಮೊಕದ್ದಮೆಗಳು ದಾಖಲಾಗಿವೆ. ಸಂಬಂಧಪಟ್ಟ ಸಮಾಜ ಕಲ್ಯಾಣ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸುವದರೊಂದಿಗೆ ಇಲಾಖೆಯ ಹಣ ದುರುಪಯೋಗವಾಗದಂತೆ ಎಚ್ಚರವಹಿಸುವಂತೆ ಒತ್ತಾಯಿಸಿದರು.

ಅಲ್ಪ ಮೊತ್ತದ ಆದಾಯದೊಂದಿಗೆ ಸಾಗುತ್ತಿರುವ ಗ್ರಾಮ ಪಂಚಾಯಿತಿಗೆ ಬಹುತೇಕ ಮಂದಿ ರೂ. 600 ರಿಂದ 3000 ಸಾವಿರದಷ್ಟು ನೀರಿನ ಕರ ಬಾಕಿ ಉಳಿಸಿಕೊಂಡಿದ್ದು, ಅಭಿವೃದ್ಧಿಗೆ ಹಿನ್ನೆಡೆಯಾಗಿದೆ ಎಂದು ಅಧ್ಯಕ್ಷರು ಪ್ರಸ್ತಾಪಿಸುತ್ತಿದಂತೆ. ನೀರಿನ ಕರ ಉಳಿಸಿಕೊಂಡವರಿಗೆ 10 ದಿನಗಳ ಕಾಲಾವಕಾಶ ನೀಡಿ ಹಣ ಸಂದಾಯವಾಗದಿದ್ದರೆ ಅವರ ನೀರಿನ ಸಂಪರ್ಕ ಕಡಿತಗೊಳಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಇತರ ವಿಷಯಗಳ ಕುರಿತು ಚರ್ಚಿಸಲಾಯಿತು.