ಸೋಮವಾರಪೇಟೆ, ಜ. 8: ಪಟ್ಟಣ ಪಂಚಾಯಿತಿ ವತಿಯಿಂದ ನೀಡಲ್ಪಟ್ಟಿರುವ ವಾಣಿಜ್ಯ ಮಳಿಗೆಗಳ ಕಂದಾಯ, ಬಾಡಿಗೆಯನ್ನು ಸಕಾಲದಲ್ಲಿ ವಸೂಲಿ ಮಾಡಬೇಕೆಂದು ಪ.ಪಂ. ವಿರೋಧ ಪಕ್ಷವಾದ ಕಾಂಗ್ರೆಸ್ನ ಸದಸ್ಯರು ಆಗ್ರಹಿಸಿದರು.ಇಲ್ಲಿನ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯು ಶಾಸಕ ಅಪ್ಪಚ್ಚು ರಂಜನ್ ಅವರ ಉಪಸ್ಥಿತಿಯಲ್ಲಿ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಬಾಕಿ ಇರುವ ನೆಲ ಬಾಡಿಗೆ, ಅಂಗಡಿ ಮಳಿಗೆಗಳ ಠೇವಣಿ ಹಾಗೂ ಬಾಡಿಗೆ, ನೀರಿನ ಕಂದಾಯ ಸೇರಿದಂತೆ ಪಟ್ಟಣ ಪಂಚಾಯಿತಿಗೆ ವಸೂಲಾಗಬೇಕಾದ ಹಣ ಬಂದರೆ ಪಂಚಾಯಿತಿಯ ಸಾಮಾನ್ಯ ನಿಧಿ ತುಂಬಲಿದೆ. ಈ ನಿಟ್ಟಿನಲ್ಲಿ ಗಮನಹರಿಸಬೇಕೆಂದು ಪ.ಪಂ. ವಿರೋಧ ಪಕ್ಷದ ಸದಸ್ಯರು ಒತ್ತಾಯಿಸಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಲ ಬಾಡಿಗೆ ಆಧಾರದಲ್ಲಿ ಹಲವಾರು ಮಂದಿ ವಕ್ರ್ಸ್ಶಾಪ್ ಸೇರಿದಂತೆ ವ್ಯಾಪಾರ ವಹಿವಾಟುಗಳನ್ನು ಮಾಡುತ್ತಿದ್ದಾರೆ. ಇವರಲ್ಲಿ ಕೆಲವರು ಅಕ್ರಮವಾಗಿ ಶೆಡ್ಗಳನ್ನು ನಿರ್ಮಿಸಿಕೊಂಡಿದ್ದಾರೆ. ಕಳೆದ ತಿಂಗಳು ಕೇವಲ ರೂ. 150 ನೆಲ ಬಾಡಿಗೆ ವಸೂಲಾಗಿದೆ.
ಇದರಂತೆ ಪಟ್ಟಣ ಪಂಚಾಯಿತಿಯಿಂದ ನೆಲ ಬಾಡಿಗೆಯಲ್ಲಿದ್ದು, ನಂತರದಲ್ಲಿ ಅವರಿಗೆ ಪರ್ಯಾಯವಾಗಿ ನೀಡಿದ ಮಳಿಗೆಗಳು ಹಾಗೂ ಹರಾಜಿನಲ್ಲಿ ಕೂಗಿದ ಮಳಿಗೆಗಳನ್ನು ಅನ್ಯರಿಗೆ ಅತೀ ಹೆಚ್ಚಿನ ಠೇವಣಿ ಹಾಗೂ ದಿನದ ಬಾಡಿಗೆ ಮೂಲಕ ಪರಭಾರೆ ಮಾಡಿದ್ದಾರೆ. ಆದಾಗ್ಯೂ ಮಳಿಗೆ ಪಡೆದವರು ಮಾತ್ರ ಪಂಚಾಯಿತಿಗೆ ಕಟ್ಟಬೇಕಾದ ಅಲ್ಪ ಬಾಡಿಗೆಯನ್ನು ಕಟ್ಟುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಕಾಂಗ್ರೆಸ್ ಸದಸ್ಯರುಗಳು ಆಗ್ರಹಿಸಿದರು.
ಸರಕಾರದಿಂದ ಕಂದಾಯವನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಶೇ. 15 ರಿಂದ 30 ರವರೆಗೆ ಏರಿಸುವಂತೆ ಸುತ್ತೋಲೆ ಬಂದಿರುವ ಬಗ್ಗೆ ಚರ್ಚಿಸಿದ ಸಂದರ್ಭ ತಾಲೂಕಿನಲ್ಲಿ ಬರ ಎದುರಾಗಿದೆ. ವ್ಯಾಪಾರ ವಹಿವಾಟುಗಳು ಕುಂಠಿತಗೊಂಡಿದೆ. ಈ ನಿಟ್ಟಿನಲ್ಲಿ ಅದನ್ನು ತಿರಸ್ಕರಿಸೋಣ ಎಂದು ಸದಸ್ಯರುಗಳಾದ ಕೆ.ಎ. ಆದಂ, ಬಿ.ಜಿ. ಇಂದ್ರೇಶ್, ನಾಗರಾಜು ಅವರುಗಳು ಹೇಳಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಶಾಸಕ ಅಪ್ಪಚ್ಚು ರಂಜನ್, ಜಿಲ್ಲೆಯ ವೀರಾಜಪೇಟೆ, ಕುಶಾಲನಗರಗಳಲ್ಲಿ ಸರಕಾರದ ಆದೇಶವನ್ನು ಪಾಲಿಸಲಾಗುತ್ತಿದ್ದು, ಇಲ್ಲಿಯೂ ಪಾಲಿಸಬೇಕಾದ ನಿಟ್ಟಿನಲ್ಲಿ ನಿವೇಶನ ಹಾಗೂ ಮನೆ ಕಂದಾಯಗಳನ್ನು ಶೇ. 15 ರಂತೆ, ವಾಣಿಜ್ಯ ಉದ್ದೇಶಿತ ಕಂದಾಯವನ್ನು ಶೇ. 16 ರಂತೆ ಏರಿಸುವಂತೆ ತೀರ್ಮಾನಿಸಲಾಯಿತು.
ಆಟೋ ಚಾಲಕರ ಸಂಘದ ಕಚೇರಿಗೆ ಸ್ಥಳ ನೀಡುವ ವಿಚಾರವಾಗಿ ಚರ್ಚೆ ನಡೆದು, ಪಟ್ಟಣ ಪಂಚಾಯಿತಿ ಕಾನೂನಿನಂತೆ ನೆಲ ಬಾಡಿಗೆ ನೀಡಲು ಅವಕಾಶವಿಲ್ಲವಾದ್ದರಿಂದ ಅವರುಗಳಿಗೆ ಬಾಡಿಗೆ ರೂಪದಲ್ಲಿ ಮಳೆಗೆಯನ್ನು ನೀಡುವಂತೆ ತೀರ್ಮಾನಿಸಲಾಯಿತು.
ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು 109 ಅರ್ಜಿಗಳು ಬಂದಿದ್ದು ಅವುಗಳಲ್ಲಿ 61 ಸಂಪೂರ್ಣವಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಅಪೂರ್ಣಗೊಂಡಿದ್ದ ಕಾಮಗಾರಿಗಳು ಹಾಗೂ ವಿವಿಧ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ರಮೇಶ್ ಶೆಟ್ಟಿಯವರ ನಿರಂತರ ಗೈರು ಇಂದೂ ಮುಂದುವರೆದರೆ, ಸದಸ್ಯೆ ಸುಷ್ಮಾ ಗೈರಾಗಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಸುಶೀಲ, ಮುಖ್ಯಾಧಿಕಾರಿ ನಾಚಪ್ಪ ಸೇರಿದಂತೆ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.