ಮಡಿಕೇರಿ, ಸೆ. 29: ಸರಕು ಸಾಗಾಟ ಮಾಡುವ ವಾಹನಗಳ ಚಾಲಕ - ಮಾಲೀಕರಿಂದ ಹಣಕ್ಕಾಗಿ ಒತ್ತಾಯಿಸಿ ಲಂಚ ಸ್ವೀಕರಿಸಿದ ಆರೋಪದ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ನಾಲ್ವರು ಸಿಬ್ಬಂದಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.

ಗಡಿಭಾಗವಾದ ಪೆರುಂಬಾಡಿ ವಾಣಿಜ್ಯ ತೆರಿಗೆ ಠಾಣೆಯ ವಾಣಿಜ್ಯ ತೆರಿಗೆ ಅಧಿಕಾರಿಯಾಗಿದ್ದ ಎಂ. ನಂಜುಂಡಸ್ವಾಮಿ, ನಿರೀಕ್ಷಕ ಹೆಚ್.ಎಸ್. ಬಸವೇಗೌಡ, ದ್ವಿತೀಯ ದರ್ಜೆ ಗುಮಾಸ್ತ ಡಿ.ಎಂ. ಮಲ್ಲಿಕಾರ್ಜುನ ಹಾಗೂ ಡಿ ಗ್ರೂಪ್ ನೌಕರ ಭಗವಾನ್ ಅವರುಗಳ ವಿರುದ್ಧ ಲೋಕಾಯುಕ್ತ ಇನ್ಸ್‍ಪೆಕ್ಟರ್ ಬಿ. ಪರಶುರಾಮ್ ಲಂಚ ನಿರೋಧಕ ಕಾಯ್ದೆ 1988ರ ಕಲಂ 7 ಹಾಗೂ 13(1) ಎ ರೆ/ವಿ 13 (2) ಅನ್ವಯ ಮಡಿಕೇರಿಯ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಪೆರುಂಬಾಡಿ ಯಲ್ಲಿರುವ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ತನಿಖಾ ಠಾಣೆಯಲ್ಲಿ ಕರ್ತವ್ಯ ನಿರತ ಅಧಿಕಾರಿಯಾಗಿದ್ದ ನಂಜುಂಡ ಸ್ವಾಮಿ ಹಾಗೂ ಇತರ ಸಿಬ್ಬಂದಿಗಳು ಕರ್ನಾಟಕದಿಂದ ಕೇರಳಕ್ಕೆ ತೆರಳುವ ಹಾಗೂ ಕೇರಳದಿಂದ ಕರ್ನಾಟಕಕ್ಕೆ ಬರುವ ಸರಕು ಸಾಗಾಣೆ ವಾಹನಗಳ ಮಾಲೀಕರು ಹಾಗೂ ಚಾಲಕರು ಗಳಿಂದ ಅಧಿಕೃತ ಬಿಲ್ ಇರುವವ ರಿಂದ ಇಲಾಖೆ ನಿಗದಿಪಡಿಸಿರುವ ಶುಲ್ಕದ ಜೊತೆಗೆ ಹೆಚ್ಚಿನ ಹಣ ಪಡೆಯುವದರೊಂದಿಗೆ ಮತ್ತು ಬಿಲ್ ಇಲ್ಲದಿರುವ ವಾಹನಗಳವರಿಂದ ಲಂಚ ಪಡೆದು ಸರಕು ಸಾಗಾಟ ಮುಂದುವರಿಸಲು ಮೌಖಿಕವಾಗಿ ಅನುಮತಿ ನೀಡಲು ಲಂಚಕ್ಕಾಗಿ ಒತ್ತಾಯ ಮಾಡಿ ಹಣ ಸಂಗ್ರಹಿಸು ತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿತ್ತು.

2014ರ ಜೂ. 17ರ ಬೆಳಗ್ಗೆ 6 ಗಂಟೆ ಸುಮಾರಿಗೆ ಲೋಕಾಯುಕ್ತ ಪೊಲೀಸರು ಪೆರುಂಬಾಡಿ ವಾಣಿಜ್ಯ ತೆರಿಗೆ ಇಲಾಖೆ, ಠಾಣೆಗೆ ದಿಢೀರ್ ಧಾಳಿ ನಡೆಸಿ ಪರಿಶೀಲಿಸಿದಾಗ ಆರೋಪಿಗಳು ಕರ್ನಾಟಕದಿಂದ ಕೇರಳಕ್ಕೆ ತೆರಳುವ ಹಾಗೂ ಕೇರಳದಿಂದ ಕರ್ನಾಟಕಕ್ಕೆ ಬರುವ ಸರಕು ಸಾಗಾಣೆ ವಾಹನಗಳನ್ನು ತಪಾಸಣೆ ಮಾಡುವ ಸಂದರ್ಭ ವಾಹನಗಳ ಚಾಲಕ ಮತ್ತು ಮಾಲೀಕ ರಿಂದ ಇಲಾಖೆ ನಿಗಧಿಪಡಿಸಿದ ಶುಲ್ಕಗಳ ಜೊತೆಗೆ ಹೆಚ್ಚುವರಿಯಾಗಿ ಲಂಚದ ಹಣಕ್ಕಾಗಿ ಒತ್ತಾಯಿಸಿ ಆ ಹಣವನ್ನು ಸಂಗ್ರಹಿಸುವ ಹವ್ಯಾಸದಲ್ಲಿ ನಿರತರಾಗಿರುವದು ಕಂಡು ಬಂದಿತ್ತು.

ಆರೋಪಿಗಳ ಪೈಕಿ ಪ್ರಮುಖ ಆರೋಪಿ ನಂಜುಂಡಸ್ವಾಮಿ ಅವರು ಕಚೇರಿ ಮುಖ್ಯಸ್ಥರಾಗಿದ್ದು, ಎರಡರಿಂದ ನಾಲ್ಕನೇ ಆರೋಪಿಗಳಾಗಿರುವ ಬಸವೇಗೌಡ, ಮಲ್ಲಿಕಾರ್ಜುನ ಹಾಗೂ ಭಗವಾನ್ ಅವರುಗಳು ಅಕ್ರಮವಾಗಿ ಲಂಚದ ಹಣ ಸಂಗ್ರಹಿಸಲು ಅನುವು ಮಾಡಿಕೊಟ್ಟಿರುವದು ತನಿಖೆ ಸಂದರ್ಭ ಬೆಳಕಿಗೆ ಬಂದಿತ್ತು. ಅಲ್ಲದೆ ಈ ಸಂದರ್ಭ ಆರೋಪಿ ಬಸವೇಗೌಡ ಅವರ ಬಳಿ ವಿವರಣೆಯಿಲ್ಲದ 1080, ಮಲ್ಲಿಕಾರ್ಜುನ ಅವರ ಬಳಿ 1265 ಹಾಗೂ ಭಗವಾನ್ ಅವರ ಬಳಿ 4,465 ರೂ. ಗಳು ಪತ್ತೆಯಾಗಿದ್ದವು. ಆರೋಪಿಗಳು ನಿರಂತರವಾಗಿ ತಪಾಸಣಾ ಠಾಣೆಯಲ್ಲಿ ಸರಕು ಸಾಗಾಣಿಕೆ ವಾಹನಗಳ ಚಾಲಕ - ಮಾಲೀಕರಿಂದ ಅಕ್ರಮವಾಗಿ ಲಂಚದ ಹಣ ಸಂಗ್ರಹಿಸುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿರುವದು ದೂರುದಾರರು ಹಾಗೂ ಸಾಕ್ಷಿದಾರರ ಹೇಳಿಕೆಗಳಿಂದ ಮತ್ತು ವಶಪಡಿಸಿ ಕೊಂಡ ದಾಖಲೆಗಳಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್‍ಪೆಕ್ಟರ್ ಬಿ. ಪರಶುರಾಮ ಅವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.

ಪ್ರಮುಖ ಆರೋಪಿ ಪ್ರಸಕ್ತ ನಿವೃತ್ತರಾಗಿದ್ದು, ಅವರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸುವ ಸಂಬಂಧ ಲೋಕಾಯುಕ್ತ ಎಡಿಜಿಪಿ ಅವರಿಂದ ಹಾಗೂ ಉಳಿದ ಆರೋಪಿಗಳ ವಿರುದ್ಧದ ದೋಷ ರೋಪಣಾ ಪಟ್ಟಿ ಸಲ್ಲಿಸಲು ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆದು ಮಡಿಕೇರಿಯ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದ್ದು, ಪ್ರಕರಣ ನಡೆದ ವ್ಯಾಪ್ತಿ ವೀರಾಜಪೇಟೆ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವದರಿಂದ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ವೀರಾಜಪೇಟೆಯ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ವರ್ಗಾಯಿಸುವ ಸಾಧ್ಯತೆ ಹೆಚ್ಚಿದೆ.