ಕುಶಾಲನಗರ, ನ. 19: ಸೋಮವಾರಪೇಟೆ ತಾಲೂಕು ಸ್ತ್ರೀಶಕ್ತಿ ಒಕ್ಕೂಟದ ಆಶ್ರಯದಲ್ಲಿ ಕುಶಾಲನಗರ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಆಯೋಜಿಸಲಾಗಿರುವ ತಾಲೂಕು ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಲಾಯಿತು. ಕುಶಾಲನಗರ ಶ್ರೀ ಗಣಪತಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್ ಮೇಳವನ್ನು ಉದ್ಘಾಟಿಸಿದರು.

ಮೇಳದಲ್ಲಿ ತಾಲೂಕಿನ 25 ಕ್ಕೂ ಅಧಿಕ ಸ್ತ್ರೀಶಕ್ತಿ ಸಂಘಗಳು ಸ್ವತಃ ತಯಾರಿಸಿರುವ ಆಹಾರ ಉತ್ಪನ್ನಗಳು, ಸಿದ್ದ ಉಡುಪುಗಳು, ತಿಂಡಿ ತಿನಿಸು, ಗೃಹ ಬಳಕೆ ವಸ್ತುಗಳು ಹಾಗೂ ಹಣ್ಣು-ಹಂಪಲುಗಳನ್ನು ಮೇಳದಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂದು ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಮೇರಿ ಅಂಬುದಾಸ್ ಮಾಹಿತಿ ನೀಡಿದರು.

ಈ ಸಂದರ್ಭ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜ್, ನಿರ್ವಾಹಕಿ ಶಾರದಾ ರಾಮನ್, ಶಿಶು ಅಭಿವೃದ್ಧಿ ಅಧಿಕಾರಿ ಜಗದೀಶ್, ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೆಹನಾ ಫಿರೋಜ್, ತಾಲೂಕು ಮೇಲ್ವಿಚಾರಕಿ ಸರಳಾ, ನಿರ್ದೇಶಕಿ ಹೇಮಲತಾ ಮತ್ತಿತರರು ಇದ್ದರು.

ಆಕ್ರೋಶ: ಸ್ತ್ರೀಶಕ್ತಿ ಒಕ್ಕೂಟದ ಆಶ್ರಯದಲ್ಲಿ ಹಮ್ಮಿಕೊಂಡಿರುವ ಮಾರಾಟ ಮೇಳಕ್ಕೆ ಜಾತ್ರಾ ಮೈದಾನದಲ್ಲಿ ಅವಕಾಶ ಕಲ್ಪಿಸದಿರುವ ಬಗ್ಗೆ ಸ್ತ್ರೀಶಕ್ತಿ ಒಕ್ಕೂಟದ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನ ರೂ. 12 ಲಕ್ಷಕ್ಕೆ ಖಾಸಗಿ ವ್ಯಕ್ತಿಯೊಬ್ಬರು ಟೆಂಡರ್ ಪಡೆದಿದ್ದು, ತಮಗೆ ಅಲ್ಲಿ ಮೇಳ ನಡೆಸಲು ಅವಕಾಶ ನಿರಾಕರಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಒಕ್ಕೂಟದ ಜಿಲ್ಲಾ ಅಧ್ಯಕ್ಷೆ ಮೇರಿ ಅಂಬುದಾಸ್, ರೆಹನಾ ಫಿರೋಜ್ ಮತ್ತು ಹೇಮಲತಾ ಅವರುಗಳು ಈ ಬಗ್ಗೆ ದೂರಿದ್ದು ಮಹಿಳೆಯರ ಕರಕುಶಲ ವಸ್ತು ಪ್ರದರ್ಶನಕ್ಕೆ ಯಾವದೇ ರೀತಿಯ ಬೆಂಬಲ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಮೈದಾನದ ಹೊರಗಡೆ ತಮಗೆ ಸ್ಥಳ ನೀಡಿದ್ದು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.