ಕುಶಾಲನಗರ, ಸೆ. 17: ವಸತಿ ಶಾಲೆಗಳು ವಿದ್ಯಾರ್ಥಿಗಳಲ್ಲಿ ಉತ್ತಮ ಸಾಮರಸ್ಯ ಉಂಟುಮಾಡುವಲ್ಲಿ ಸಹಕಾರಿಯಾಗಿವೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಹೇಳಿದರು.ಕೂಡಿಗೆಯ ಬಸವನತ್ತೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರಕಾರ ಶಿಕ್ಷಣ ರಂಗಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲಕರವಾದ ವಾತಾವರಣ ನಿರ್ಮಾಣ ಮಾಡುವಲ್ಲಿ ಕಾರ್ಯನಿರ್ವಹಿಸುತ್ತಿದೆ. ದೇಶಕ್ಕೆ ಹಲವು ವೀರ ಸೇನಾನಿಗಳು ಹಾಗೂ ಕ್ರೀಡಾಪಟುಗಳನ್ನು ಕೊಡುಗೆ ನೀಡಿ ರುವ ಕೊಡಗು ಜಿಲ್ಲೆ ಶೈಕ್ಷಣಿಕವಾಗಿ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರು ವದು ಸಂತಸದ ವಿಚಾರ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ವಸತಿ ಶಾಲೆಗಳ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಜಾತಿ, ವರ್ಗಗಳಿಂದ ವಿಂಗಡನೆ ಮಾಡುವ ಬದಲಾಗಿ ವಿವಿಧ ಸಮುದಾಯಗಳ ವಿದ್ಯಾರ್ಥಿಗಳು ಒಗ್ಗೂಡಿ ಶಿಕ್ಷಣ ಪಡೆದುಕೊಳ್ಳುವಂತ ವ್ಯವಸ್ಥೆ ಜಾರಿಗೊಳಿಸಲು ವಿಧಾನಸಭೆ ಯಲ್ಲಿ ಪ್ರಸ್ತಾಪಿಸಲಾಗು ವದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ವಿಜು ಸುಬ್ರಮಣಿ, ಶ್ರೀನಿವಾಸ್, ಸದಸ್ಯರಾದ ಕೆ.ಪಿ.ಚಂದ್ರಕಲಾ, ಮಂಜುಳಾ, ಮಾಜಿ ಸದಸ್ಯ ಎಸ್.ಎನ್. ರಾಜಾರಾವ್, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಕೂಡಾ ಮಾಜಿ ಅಧ್ಯಕ್ಷ ಎಸ್.ಎನ್. ನರಸಿಂಹಮೂರ್ತಿ, ಕೂಡಿಗೆ ಡಯಟ್ ಪ್ರಾಂಶುಪಾಲ ದೊಡ್ಡಮಲ್ಲಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಇದೇ ಸಂದರ್ಭ ಅತಿ ಹೆಚ್ಚು ಅಂಕಗಳಿಸಿದ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು. ಕೊಡಗು ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಕೆ.ವಿ.ಸುರೇಶ್ ಸ್ವಾಗತಿಸಿದರು.