ಮಡಿಕೇರಿ, ಆ. 3: ಮೂಲ ನಿವಾಸಿ ಅಭಿವೃದ್ಧಿ ಯೋಜನೆಯಡಿ ಪರಿಶಿಷ್ಟ ಪಂಗಡದ ಜೇನುಕುರುಬ ಜನಾಂಗದವರಿಗೆ ಮನೆ ನಿರ್ಮಾಣ ಕಾರ್ಯದಲ್ಲಿ ಪ್ರಗತಿ ಸಾಧಿಸದೆ ಹಿಂದೆ ಬಿದ್ದಿದ್ದು, ಕೂಡಲೇ ಮನೆ ನಿರ್ಮಾಣ ಕಾರ್ಯದಲ್ಲಿ ಪ್ರಗತಿ ಸಾಧಿಸಬೇಕು. ಇಲ್ಲದಿದ್ದಲ್ಲಿ ಪ್ರಗತಿ ಅಸಾಧ್ಯ ಎಂದು ತಿಳಿಸಬೇಕು. ಅದನ್ನು ಬಿಟ್ಟು ಕಾಲಹರಣ ಮಾಡುವದು ಬೇಡ ಎಂದು ಸಂಬಂಧಪಟ್ಟ ಇಂಜಿನಿ ಯರ್‍ಗಳಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಎಚ್ಚರಿಕೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮೂಲ ನಿವಾಸಿ ಜೇನುಕುರುಬ ಜನಾಂಗದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಲವು ವರ್ಷಗಳಿಂದ ಮೂಲ ನಿವಾಸಿ ಗಿರಿಜನರಿಗೆ ವಸತಿ ಯೋಜನೆಯಡಿ ಮನೆ ನಿರ್ಮಿಸಲು ಮುಂದಾಗಲಾಗಿದೆ. ಆದರೆ ಪ್ರಗತಿ ಕುಂಠಿತವಾಗಿದೆ. ಇದಕ್ಕೆ ಕಾರಣವೇನು ಎಂದು ಜಿಲ್ಲಾಧಿಕಾರಿ ಅಸಮಾದಾನ ವ್ಯಕ್ತಪಡಿಸಿದರು.
ವಸತಿ ಯೋಜನೆ ಸೇರಿದಂತೆ ಯಾವದೇ ರೀತಿಯ ಕಾಮಗಾರಿ ಗಳನ್ನು ವಹಿಸಿಕೊಂಡ ಮೇಲೆ ಅದನ್ನು ಕಾಲಮಿತಿಯೊಳಗೆ ಪೂರ್ಣ ಗೊಳಿಸಬೇಕು. ಅದನ್ನು ಬಿಟ್ಟು ಗುತ್ತಿಗೆದಾರರು ಮುಂದೆ ಬರುತ್ತಿಲ್ಲ ವೆಂದು ನೆಪ ಹೇಳಿಕೊಂಡು ದಿನ ದೂಡುವದು ಸರಿಯೇ.
2008-09ರಲ್ಲಿ 88 ಮನೆಗಳು, 2010-11 ರಲ್ಲಿ 225, 2011-12ರಲ್ಲಿ 138, 2012-13ರಲ್ಲಿ 184, 2013-14ರಲ್ಲಿ 50 ಮನೆಗಳು ಒಟ್ಟು 820 ಮನೆಗಳ ನಿರ್ಮಾಣಕ್ಕೆ ಬಾಕಿ ಇವೆ ಎಂದು ಹೇಳಲಾಗಿದೆ. ವಸತಿ ಯೋಜನೆಗಳನ್ನು ಪೂರ್ಣಗೊಳಿ ಸುವದು ಯಾವಾಗ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದರು.
ಐಟಿಡಿಪಿ ಇಲಾಖಾ ಅಧಿಕಾರಿ ಸತೀಶ್ ಮಾಹಿತಿ ನೀಡಿ 1250 ಮನೆಗಳ ನಿರ್ಮಾಣ ಗುರಿಯಲ್ಲಿ 1,108 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ಉಳಿದ 142 ಫಲಾನು ಭವಿಗಳ ಆಯ್ಕೆ ಮಾಡಬೇಕಿದೆ. 476 ಮನೆಗಳ ಕಾಮಗಾರಿ ವಿವಿಧ ಹಂತದಲ್ಲಿದ್ದು, ಪಂಚಾಯತ್ ರಾಜ್ ಇಂಜಿನಿಯ ರಿಂಗ್ ಇಲಾಖೆಗೆ ವಹಿಸಲಾಗಿದ್ದ 281 ಮನೆಗಳ ಕಾಮಗಾರಿ ಪ್ರಾರಂಭವಾಗಿಲ್ಲ. ವನ್ಯಜೀವಿ ವ್ಯಾಪ್ತಿಯ 148 ಮನೆಗಳ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ದೊರೆತ್ತಿಲ್ಲ ಎಂದು ಅವರು ಮಾಹಿತಿ ನೀಡಿದರು. ವಸತಿ ಯೋಜನೆ ಪ್ರಗತಿ ಸಂಬಂಧ ಮಾಹಿತಿ ನೀಡಿದ ಜೇನುಕುರುಬ ಪ್ರಮುಖರು ಹಾಗೂ ಸಮಿತಿ ಸದಸ್ಯರಾದ ಜೆ.ಪಿ. ರಾಜು, ಜೆ.ಕೆ. ರಾಮು, ಇಂದಿರಾ ಹಾಗೂ ಸೋಮಯ್ಯ ಅವರು ಕೆಲವು ಕುಟುಂಬಗಳು ವೈಯಕ್ತಿಕವಾಗಿ ಮನೆ ನಿರ್ಮಿಸಿಕೊಳ್ಳಲು ಮುಂದಾದರೆ, ಕೆಲವು ಕುಟುಂಬಗಳು ಹಿಂದೆ ಸರಿಯುತ್ತವೆ. ಫಲಾನುಭವಿಗಳೇ ವೈಯಕ್ತಿಕವಾಗಿ ಕಟ್ಟಿಸಿಕೊಂಡರೆ ಅನುಕೂಲವಾಗಲಿದೆ ಎಂದರು.
ಜಿ.ಪಂ. ಸಿಇಓ ಚಾರುಲತಾ ಸೋಮಲ್ ಮಾತನಾಡಿ, ವನ್ಯಜೀವಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ನಿರ್ಮಾಣಕ್ಕೆ ಅನುಮತಿ ಪಡೆಯಲಾಗಿದೆ. ಮನೆ ನಿರ್ಮಾಣಕ್ಕೂ ಸಹ ಪ್ರಯತ್ನಿಸಲಾಗುವದು ಎಂದು ಅವರು ತಿಳಿಸಿದರು. ಸಮಿತಿ ಸದಸ್ಯೆ ಇಂದಿರಾ ಅವರು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಅಧಿಕಾರಿಗಳು ವಸತಿ ಗೃಹಗಳನ್ನು ನಿರ್ಮಿಸಿಕೊಳ್ಳ ಬಹುದಾಗಿದೆ. ಆದರೆ ಗಿರಿಜನರು ಗುಡಿಸಲು ಕಟ್ಟಲು ಸಹ ಬಿಡುತ್ತಿಲ್ಲ ಎಂದು ಅವರು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಮತ್ತೊಬ್ಬ ಸಮಿತಿ ಸದಸ್ಯ ಸೋಮಯ್ಯ ಅವರು ಮೂಲ ನಿವಾಸಿ ಗಿರಿಜನರು ಅನಾದಿ ಕಾಲದಿಂದಲೂ ಪ್ರಾಣಿಗಳ ಜೊತೆ ಒಡನಾಟ ಇಟ್ಟುಕೊಂಡು ಬದುಕುತ್ತಿದ್ದೇವೆ. ಕನಿಷ್ಟ ಮೂರು ಏಕರೆ ಕೃಷಿ ಭೂಮಿಯನ್ನು ಒದಗಿಸಬೇಕು ಎಂದು ಅವರು ಮನವಿ ಮಾಡಿದರು. ಸ್ವಯಂ ಉದ್ಯೋಗ ತರಬೇತಿ ಕಾರ್ಯಕ್ರಮದಡಿ ವೀರಾಜಪೇಟೆ ತಾಲೂಕಿನಲ್ಲಿ 18 ಫಲಾನುಭವಿಗಳಿಗೆ ಲಘು ವಾಹನ ಚಾಲನಾ ತರಬೇತಿ ನೀಡಲು ಗುರಿ ನಿಗದಿಪಡಿಸಲಾಗಿದ್ದು, ಪ್ರಸ್ತುತ ಎಲ್ಲಾ 18 ಫಲಾನುಭವಿಗಳಿಗೆ ಲಘು ವಾಹನ ಚಾಲನಾ ತರಬೇತಿ ನೀಡಲಾಗಿದೆ ಎಂದು ಐಟಿಡಿಪಿ ಇಲಾಖಾ ಅಧಿಕಾರಿ ಸತೀಶ್ ಮಾಹಿತಿ ನೀಡಿದರು.
ಅಂಗಡಿ ವ್ಯಾಪಾರ ಕೈಗೊಳ್ಳಲು ರೂ. 50 ಸಾವಿರ ಧನ ಸಹಾಯ ನೀಡಲು ವೀರಾಜಪೇಟೆ ತಾಲೂಕಿನ 6 ಮತ್ತು ಸೋಮವಾರಪೇಟೆ ತಾಲೂಕಿನ 4 ಫಲಾನುಭವಿಗಳನ್ನು ಆಯ್ಕೆ ಮಾಡಲು ಅನುಮೋದನೆ ನೀಡಲಾಯಿತು. ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ಟಾಟಾ ಏಸ್ ಗೂಡ್ಸ್ ಆಟೋಗಳನ್ನು ಖರೀದಿಸಲು ಶೇ. 75 ರಷ್ಟು ಸಹಾಯಧನ, ರೂ. 3.34 ಲಕ್ಷಗಳಂತೆ ರೂ. 16.50 ಲಕ್ಷ ನಿಗದಿಪಡಿಸಲಾಗಿದ್ದು, ವೀರಾಜಪೇಟೆ ತಾಲೂಕಿಗೆ 3 ಮತ್ತು ಸೋಮವಾರಪೇಟೆ ತಾಲೂಕಿಗೆ 2 ಗುರಿಯನ್ನು ನಿಗದಿಪಡಿಸಲಾಗಿದ್ದು, ಇದಕ್ಕೆ ಅನುಮೋದನೆ ನೀಡಲಾಯಿತು.
ಹಾಗೆಯೇ ಅಕ್ಟೋಬರ್ 4 ರಂದು ಕುಶಾಲನಗರದ ರೈತ ಸಭಾಂಗಣದಲ್ಲಿ ಜೇನುಕುರುಬರ ಸಂಸ್ಕøತಿ ಹಾಗೂ ಜಾನಪದ ಸಮ್ಮೇಳನ ಆಯೋಜಿಸಲು ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ನಿರ್ಧರಿಸಲಾಗಿದ್ದು, ಇದಕ್ಕೆ ಜಿಲ್ಲಾಧಿಕಾರಿ ಅವರಿಂದ ಅನುಮೋದನೆ ಪಡೆಯಲಾಯಿತು. ಹಾಡಿಗಳಲ್ಲಿ ಕರ್ತವ್ಯ ನಿರ್ವಹಿಸಲು ಆರೋಗ್ಯ ಪ್ರೇರಕಿಯರ ಮುಂದುವರಿಕೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಈ ಸಂಬಂಧ ಆರೋಗ್ಯ ಪ್ರೇರಕಿಯರ ಕರ್ತವ್ಯ ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಯಶಸ್ವಿನಿ ಯೋಜನೆಯಡಿ ಮೂಲ ನಿವಾಸಿ ಗಿರಿಜನರು ಹೆಸರು ನೋಂದಾಯಿಸಿ ಕೊಳ್ಳಬೇಕು. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಐಟಿಡಿಪಿ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.
ಮೂಲ ನಿವಾಸಿ ಅಭಿವೃದ್ಧಿ ಯೋಜನೆಯಡಿ ನೀರಾವರಿ ಸೌಲಭ್ಯ ಕಾರ್ಯಕ್ರಮಕ್ಕೆ ಮೀಸಲಿಟ್ಟ ರೂ. 45 ಲಕ್ಷ, ಭೂ ಖರೀದಿ, ಭೂ ಸಮತಟ್ಟು ಕಾರ್ಯಕ್ರಮಕ್ಕೆ ರೂ. 15 ಲಕ್ಷ, ಒಟ್ಟು ರೂ. 67 ಲಕ್ಷ ಅನುದಾನಕ್ಕೆ ಕ್ರಿಯಾ ಯೋಜನೆ ತಯಾರಿಸಲಾಗಿದ್ದು, ಸಭೆಯಲ್ಲಿ ಅನುಮೋದನೆ ನೀಡಲಾಯಿತು. ರಸ್ತೆ ಅಭಿವೃದ್ಧಿ, ಕಾಲು ಸೇತುವೆ, ಸಮುದಾಯ ಭವನ ಮತ್ತಿತರಕ್ಕಾಗಿ ಸುಮಾರು ರೂ. 40 ಲಕ್ಷ ನಿಗದಿಪಡಿಸಲಾಗಿದ್ದು, ಬದಲಿ ಕಾಮಗಾರಿಗಳಿಗಾಗಿ ಅನುಮೋದನೆ ಕೋರಲಾಯಿತು. ಟಾಟಾ ಏಸ್ ಗೂಡ್ಸ್ ಆಟೋ ಖರೀದಿಗೆ ಸಹಾಯಧನ ರೂ. 34 ಲಕ್ಷ, ಆಡಿನಾಡೂರು ಸಿಸಿ ರಸ್ತೆ ನಿರ್ಮಾಣ, ಕುಡಿಯುವ ನೀರು, ಸಿಬಿ ಹಳ್ಳಿ ಸೋಲಿಂಗ್ ರಸ್ತೆ ನಿರ್ಮಾಣ, ರೇಷ್ಮೆಹಡ್ಲು ಹಾಡಿ ಸಿಸಿ ರಸ್ತೆ ನಿರ್ಮಾಣ, ಚೊಟ್ಟೆಪಾರೆ ಸಿಸಿ ರಸ್ತೆ ನಿರ್ಮಾಣ ಮತ್ತಿತರ ರೂ. 67 ಲಕ್ಷಗಳ ಕ್ರಿಯಾ ಯೋಜನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಆಲೂರು-ಸಿದ್ದಾಪುರದಲ್ಲಿ ಸಿಸಿ ರಸ್ತೆ ನಿರ್ಮಾಣ ರೂ. 7 ಲಕ್ಷ, ಸಿದ್ದಾಪುರ-ದುಬಾರೆ ಕುಡಿಯುವ ನೀರಿಗಾಗಿ ಒಟ್ಟು 15 ಲಕ್ಷ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ.ಆರ್. ಶ್ರೀರಂಗಪ್ಪ, ಸಲಹೆ ಮಾಡಿದರು. ಜಿ.ಪಂ. ಇಂಜಿನಿಯರ್ ಶಶಿಧರ, ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳಾದ ರಾಮೇಗೌಡ, ಚಂದ್ರಶೇಖರ ಅವರು ಹಲವು ಮಾಹಿತಿ ನೀಡಿದರು.