ಕುಶಾಲನಗರ, ಡಿ. 6: ವಸತಿಗೃಹಗಳಿಂದ ನೇರವಾಗಿ ಚರಂಡಿ ಮೂಲಕ ಕಾವೇರಿ ನದಿಗೆ ಶೌಚ ತ್ಯಾಜ್ಯಗಳನ್ನು ಹರಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರದಲ್ಲಿ 5 ಲಾಡ್ಜ್‍ಗಳ ಮಾಲೀಕರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.
ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಬೆಳಗ್ಗೆ ಪಟ್ಟಣದ ಐಬಿ ರಸ್ತೆಯ ಮತ್ತು ಇತರೆಡೆ ಲಾಡ್ಜ್‍ಗಳ ಮೇಲೆ ದಿಢೀರ್ ಪರಿಶೀಲನೆ ನಡೆಸಿದ ಸಂದರ್ಭ ಅಸಹನೀಯ ದೃಶ್ಯಗಳು ಬೆಳಕಿಗೆ ಬಂದಿವೆ. ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ನಿರ್ದೇಶನದ ಮೇಲೆ ಪಂಚಾಯಿತಿಯ ಆರೋಗ್ಯ ಅಧಿಕಾರಿ ಲಿಂಗರಾಜು ಮತ್ತು ಪೌರಕಾರ್ಮಿಕರು ರಸ್ತೆಯ ಬದಿಯ ಲಾಡ್ಜ್‍ಗಳನ್ನು ಪರಿಶೀಲನೆ ಒಳಪಡಿಸಿದ ಸಂದರ್ಭ ಬಹುತೇಕ ಕಟ್ಟಡಗಳಿಂದ ಶೌಚಾಲಯದ ತ್ಯಾಜ್ಯ ನೇರವಾಗಿ ಚರಂಡಿಗೆ ಹರಿಸುತ್ತಿರುವ ದೃಶ್ಯ ಕಂಡುಬಂದಿದೆ.
ಈ ಮೂಲಕ ತ್ಯಾಜ್ಯಗಳು ಕಾವೇರಿ ನದಿಗೆ ಸೇರಿ ಕಲುಷಿತಗೊಳ್ಳಲು ಪ್ರಮುಖ ಕಾರಣವಾಗುತ್ತಿರುವದು ಬೆಳಕಿಗೆ ಬಂದಿದೆ. ಐಬಿ ರಸ್ತೆಯ ಎಸ್‍ಡಿಎಂ ಲಾಡ್ಜ್, ಕನ್ನಿಕಾ ಇಂಟರ್‍ನ್ಯಾಷನಲ್ ಲಾಡ್ಜ್‍ಗಳಿಂದ ಮತ್ತು ರಸ್ತೆಯ ಬದಿಯ ಕಟ್ಟಡಗಳಿಂದ ನೇರವಾಗಿ ಸಾರ್ವಜನಿಕ ಚರಂಡಿಗೆ ಶೌಚ ತ್ಯಾಜ್ಯಗಳನ್ನು ಹರಿಸುತ್ತಿರುವದು ಈ ಮೂಲಕ ಇಡೀ ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ವಸತಿ ಗೃಹಗಳಿಗೆ ಬೀಗ ಜಡಿಯಲು ಮುಂದಾಗಿದ್ದಾರೆ. ಇದೇ ರೀತಿ ಶೌಚ ತ್ಯಾಜ್ಯಗಳನ್ನು ನೇರವಾಗಿ ಚರಂಡಿಗೆ ಹರಿಸುತ್ತಿದ್ದ ಪ್ರಕರಣಗಳ ಹಿನ್ನೆಲೆಯಲ್ಲಿ ಪಟ್ಟಣದ ಮಡಿಕೇರಿ ರಸ್ತೆಯಲ್ಲಿರುವ ಕ್ಯಾರವಾನ್, ಮೈಸೂರು ರಸ್ತೆಯ ಪ್ಲಾಂಟರ್ಸ್ ಇನ್ ಹೊಟೇಲ್ ಮಾಲೀಕರ ವಿರುದ್ದವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ತಿಳಿಸಿದ್ದಾರೆ. ಪಟ್ಟಣದ ಎಲ್ಲಾ ಕಟ್ಟಡಗಳು ಮತ್ತು ವಸತಿ ಗೃಹಗಳು, ಹೊಟೇಲ್‍ಗಳ ಪರಿಶೀಲನೆ ಕಾರ್ಯ ಮುಂದುವರೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಈ ನಡುವೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಇಂತಹ ಲಾಡ್ಜ್‍ಗಳಿಗೆ ಬೀಗ ಜಡಿದು ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ಮುಂದಾಗುವಂತೆ ಆದೇಶಿಸಿರುವದಾಗಿ ತಿಳಿದು ಬಂದಿದೆ.
ಕಾವೇರಿ ನದಿ ನೀರು ಕಲುಷಿತಗೊಳ್ಳುವದರೊಂದಿಗೆ ಗುಣಮಟ್ಟ ಕುಸಿಯುತ್ತಿದ್ದು ಸಿ ದರ್ಜೆಗೆ ಇಳಿದಿರುವ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಅಧಿಕೃತ ಮಾಹಿತಿ ಹೊರ ಹಾಕಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ನದಿ ತಟದ ಗ್ರಾಮ ಪಂಚಾಯಿತಿ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನದಿ ಕಲುಷಿಕೆಗೆ ಕಾರಣವಾಗುತ್ತಿರುವ ಕಟ್ಟಡಗಳ ಮಾಲೀಕರ ಮೇಲೆ ಕ್ರಮಕೈಗೊಳ್ಳುವ ಮೂಲಕ ಕಾವೇರಿ ನದಿ ಸಂರಕ್ಷಣೆಗೆ ಒತ್ತು ನೀಡುವಂತೆ ಪಂಚಾಯಿತಿ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೂ ಕುಶಾಲನಗರ, ಕೂಡುಮಂಗಳೂರು, ಕೂಡಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ನೋಟೀಸ್ ನೀಡಲಾಗಿದ್ದು ನದಿ ಸಂರಕ್ಷಣೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿರುವದಾಗಿ ಪರಿಸರ ಮಂಡಳಿ ಅಧಿಕಾರಿ ಗಣೇಶನ್ ಮಾಹಿತಿ ನೀಡಿದ್ದಾರೆ. ನದಿ ತಟದಲ್ಲಿ ಮಾಂಸ ಮಾರಾಟ ಮಳಿಗೆಗಳಿಗೆ ಅವಕಾಶ ಕಲ್ಪಿಸಿರುವದನ್ನು ತಕ್ಷಣ ತೆರವುಗೊಳಿಸುವಂತೆ ಸೂಚನೆ ನೀಡಿರುವದಾಗಿ ತಿಳಿಸಿದ್ದಾರೆ.