ಮಡಿಕೇರಿ, ಆ.12: ಕೊಡಗಿನಲ್ಲಿ ವಲಸಿಗರ ಸಂಖ್ಯೆ ಅಧಿಕವಾಗುತ್ತಿದೆ. ತೋಟಗಳಲ್ಲಿ, ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ಹಾಗೂ ಹೋಂಸ್ಟೇಗಳಲ್ಲಿ ಬಾಂಗ್ಲಾ ದೇಶೀಯರು, ಅಸ್ಸಾಮಿಗಳು ಇತ್ಯಾದಿ ವಲಸಿಗರು ಕಾರ್ಮಿಕರಾಗಿ ಜಿಲ್ಲೆಗೆ ಬರುತ್ತಿದ್ದಾರೆ. ಆದರೆ, ಈ ಮಂದಿಯನ್ನು ಕೆಲಸಕ್ಕೆ ನೇಮಿಸಿಕೊಳ್ಳುವಾಗ ಸೂಕ್ತ ಗುರುತು ಪತ್ರ ದಾಖಲೆಗಳಿರಬೇಕು. ಅಲ್ಲದೆ, ಆ ಬಗ್ಗೆ ಆಯಾ ಸ್ಥಳೀಯ ಪೊಲೀಸರ ಗಮನಕ್ಕೆ ತರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಸೂಚಿಸಿದ್ದಾರೆ. ಇದೀಗ ಆಯಾ ಪೊಲೀಸ್ ಠಾಣೆಯ ತಲಾ 2 ಮಂದಿ ಸಿಬ್ಬಂದಿಯನ್ನೂ ಒಳಗೊಂಡಂತೆ 10 ಮಂದಿ ವಿಶೇಷ ಪೊಲೀಸ್ ತಂಡವೂ ಸೇರಿ ಒಟ್ಟು 40 ಮಂದಿ ಪೊಲೀಸ್ ಸಿಬ್ಬಂದಿಯನ್ನು ಜಿಲ್ಲೆಯ ತೋಟಗಳಲ್ಲಿ ಮಾಹಿತಿ ಕಲೆ ಹಾಕಲು ನೇಮಿಸಲಾಗಿದೆ.